
ಕಂಪ್ಲಿ: ‘ಇಲ್ಲಿನ ಕೋಟೆ ಪ್ರದೇಶದ ಬಳಿಯ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರಾಜ್ಯ ಹೆದ್ದಾರಿ-29ರ ಸಂಪರ್ಕ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆಯೇ’ ಎಂದು ವಿಧಾನಪರಿಷತ್‌ನಲ್ಲಿ ವೈ.ಎಂ. ಸತೀಶ್ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ‘ಹೊಸ ಸೇತುವೆ ನಿರ್ಮಾಣವನ್ನು ₹100 ಕೋಟಿ ಅಂದಾಜು ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಅದರಿಂದ ಲೋಕೋಪಯೋಗಿ ಇಲಾಖೆಯ ಅಂಗ ಸಂಸ್ಥೆಯಾದ ‘ಯೋಜನೆ ಮತ್ತು ರಸ್ತೆ ಆಸ್ತಿಗಳ ನಿರ್ವಹಣಾ ಕೇಂದ್ರ (ಪಿ.ಆರ್.ಎ.ಎಂ.ಸಿ)’ ಸೇತುವೆಯ ಪರಿವೀಕ್ಷಣೆ ನಡೆಸಿದ್ದು, ಬದಲಿ ಅಲೈನ್‍ಮೆಂಟ್‍ನಲ್ಲಿ ಒಂದು ಹೊಸ ‘ಹೈ ಲೆವೆಲ್ ಬ್ರಿಡ್ಜ್’ ನಿರ್ಮಿಸುವುದು ಸೂಕ್ತ ಎಂದು ವರದಿ ನೀಡಿದೆ ಎಂದಿದ್ದಾರೆ.
ಸೇತುವೆಯ ಸ್ಥಳದಲ್ಲಿ ವಿವರವಾದ ಅಧ್ಯಯನ ನಡೆಸಿ ವಿಸ್ತೃತ ಪ್ರಗತಿ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸುವ ಸಲುವಾಗಿ ಸಮಾಲೋಚಕರನ್ನು ನೇಮಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಅನುಮೋದಿತ ಸಮಾಲೋಚಕರಾದ ‘ಎಂ.ಎಸ್. ಇನ್‍ಫ್ರಾ ಸಪೋರ್ಟ್ ಎಂಜಿನಿಯರಿಂಗ್ ಕನ್‌ಸಲ್ಟ್ಸ್ ಪ್ರೈವೇಟ್ ಲಿಮಿಟೆಡ್’ ಗುತ್ತಿಗೆ ಒಡಂಬಡಿಕೆ ಮಾಡಿಕೊಂಡ ನಂತರ ಒಂದು ತಿಂಗಳ ಅವಧಿಯೊಳಗಾಗಿ ವಿಸ್ತೃತ ಯೋಜನಾ ವರದಿಯನ್ನು ಸಮಾಲೋಚಕರಿಂದ ತಯಾರಿಸಿ ಮುಂದಿನ ಪ್ರಕ್ರಿಯೆಗಳನ್ನು ಜರುಗಿಸಲಾಗುವುದು ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.