ADVERTISEMENT

102ನೇ ಸಲ ರಕ್ತದಾನ ಮಾಡಿದ ಶಾಸ್ತ್ರಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 14:46 IST
Last Updated 27 ಆಗಸ್ಟ್ 2019, 14:46 IST
102 ಸಲ ರಕ್ತದಾನ ಮಾಡಿರುವ ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ್‌ ಶಾಸ್ತ್ರಿ ಅವರನ್ನು ಮಂಗಳವಾರ ಹೊಸಪೇಟೆಯಲ್ಲಿ ಸನ್ಮಾನಿಸಲಾಯಿತು
102 ಸಲ ರಕ್ತದಾನ ಮಾಡಿರುವ ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ್‌ ಶಾಸ್ತ್ರಿ ಅವರನ್ನು ಮಂಗಳವಾರ ಹೊಸಪೇಟೆಯಲ್ಲಿ ಸನ್ಮಾನಿಸಲಾಯಿತು   

ಹೊಸಪೇಟೆ: ಇಲ್ಲಿನ ವಿಜಯನಗರ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಚಂದ್ರಶೇಖರ್‌ ಶಾಸ್ತ್ರಿ ಅವರು ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 102ನೇ ಸಲ ರಕ್ತದಾನ ಮಾಡಿದರು.

1981ರಲ್ಲಿ ಮೊದಲ ಬಾರಿಗೆ ರಕ್ತದಾನ ಮಾಡಿದ ಶಾಸ್ತ್ರಿಯವರು, ಅದನ್ನು ಈಗಲೂ ಮುಂದುವರೆಸಿದ್ದಾರೆ. ಅಂದಹಾಗೆ, ಶಾಸ್ತ್ರಿಯವರು ಸತತ ರಕ್ತದಾನ ಮಾಡುತ್ತಿರುವುದಕ್ಕೆ ವಿಶೇಷ ಕಾರಣವೊಂದಿದೆ.

'ನನ್ನ ತಂಗಿ ಸ್ವರ್ಣ ರಕ್ತಯಿಲ್ಲದೇ ಸಾವನ್ನಪ್ಪಿದ್ದಳು. ಇಂತಹ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು ಎಂಬ ಕಾರಣಕ್ಕಾಗಿ ಅಂದಿನಿಂದ ಸತತವಾಗಿ ರಕ್ತ ಕೊಡುತ್ತ ಬಂದಿರುವೆ. ರಕ್ತ ಕೊಡುವುದರಿಂದ ನನಗೆ ಇದುವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಬದಲಾಗಿ ಆರೋಗ್ಯ ವೃದ್ಧಿಸಿದೆ’ ಎಂದು ಹೇಳಿದರು.

ADVERTISEMENT

‘ಯಾರು ಬೇಕಾದರೂ ರಕ್ತ ಕೊಡಬಹುದು. ಸೂಕ್ತ ಪ್ರಮಾಣದಲ್ಲಿ ರಕ್ತವಿದ್ದರಷ್ಟೇ ಪಡೆಯುತ್ತಾರೆ. ಅನಗತ್ಯವಾಗಿ ಯಾರಿಂದಲೂ ರಕ್ತ ಪಡೆಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜನ ಸ್ವಯಂಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ನಿತ್ಯ ಅಪಘಾತಗಳಲ್ಲಿ ಅನೇಕ ಜನ ಗಾಯಗೊಳ್ಳುತ್ತಾರೆ. ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯವಿರುವವರಿಗೆ ಕೊಟ್ಟು ಜೀವ ಉಳಿಸಬಹುದು. ಈ ಪುಣ್ಯದ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ರೆಡ್‌ಕ್ರಾಸ್‌ ಸೊಸೈಟಿಯ ಅಧ್ಯಕ್ಷರೂ ಆಗಿರುವ ಶಾಸ್ತ್ರಿ ಹೇಳಿದರು.

ಅದೇ ರೀತಿ ವಿಜಯನಗರ ಕಾಲೇಜಿನ 106 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದೇ ಸಂದರ್ಭದಲ್ಲಿ ರಕ್ತ ದಾನ ಮಾಡಿದರು.

ಕಾಲೇಜಿನ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ,ಪ್ರಾಚಾರ್ಯ ವಿ.ಎಸ್‌. ಪ್ರಭಯ್ಯ, ಡಾ. ಸೋಮಶೇಖರ್‌, ಎಚ್‌.ಡಿ.ಎಫ್‌.ಸಿ. ಬ್ಯಾಂಕಿನ ವ್ಯವಸ್ಥಾಪಕ ವಿನಾಯಕ, ಸಹಾಯಕ ವ್ಯವಸ್ಥಾಪಕ ಕಿರಣ ಪ್ರಭು, ಎನ್‌.ಸಿ.ಸಿ., ಎನ್‌.ಎಸ್‌.ಎಸ್‌. ವಿದ್ಯಾರ್ಥಿಗಳು ಇದ್ದರು.ವಿಜಯನಗರ ಕಾಲೇಜು, ಎಚ್‌.ಡಿ.ಎಫ್‌.ಸಿ., ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆ ಹಾಗೂ ಬಳ್ಳಾರಿ ವಿಮ್ಸ್‌ ಸಹಭಾಗಿತ್ವದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.