ಬಳ್ಳಾರಿ: ಗಣಿಗಾರಿಕೆ ನಡೆಯುತ್ತಿರುವ ಜಿಲ್ಲೆಗಳಲ್ಲಿ (ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು) ಕಬ್ಬಿಣದ ಅದಿರಿನ ಉತ್ಪಾದನೆ ಮಿತಿಯನ್ನು ಹೆಚ್ಚಿಸುವ ಪ್ರಸ್ತಾವವು ರಸ್ತೆ ಅಪಘಾತಗಳ ಸಂಖ್ಯೆ ತೀವ್ರವಾಗಿ ಹೆಚ್ಚುವ, ಗಂಭೀರ ಸುರಕ್ಷತೆ ಮತ್ತು ಪರಿಸರ ಹಾನಿಯ ಭೀತಿ ಹುಟ್ಟು ಹಾಕಿದೆ.
ಕಬ್ಬಿಣದ ಅದಿರುವ ಉತ್ಪಾದನೆಗೆ ರಾಜ್ಯದಲ್ಲಿರುವ ಮಿತಿಯನ್ನು ಹೆಚ್ಚಿಸುವ ಸಂಬಂಧ ಕೇಂದ್ರದ ಉನ್ನತಾಧಿಕಾರ ಸಮಿತಿ(ಸಿಇಸಿ)ಯು ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ.
ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿರುವ ಎಲ್ಲಾ ಕಬ್ಬಿಣದ ಅದಿರು ಗಣಿ ಗುತ್ತಿಗೆಗಳಿಗೆ 57 ದಶಲಕ್ಷ ಟನ್‌ನ (ಎಂಟಿ) ಏಕೀಕೃತ ವಾರ್ಷಿಕ ಉತ್ಪಾದನಾ ಮಿತಿಯನ್ನು ನಿಗದಿಪಡಿಸಲು ಸಿಇಸಿಯು ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿದೆ.
ಸದ್ಯ ಬಳ್ಳಾರಿ ಜಿಲ್ಲೆಗೆ (ವಿಜಯನಗರವೂ ಸೇರಿದಂತೆ) ವಾರ್ಷಿಕ 35 ಎಂಟಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ವಾರ್ಷಿಕ 15 ಎಂಟಿ, ಸೇರಿ ಒಟ್ಟಾರೆ ರಾಜ್ಯದಲ್ಲಿ 50 ಎಂಟಿ ಉತ್ಪಾದನೆಯ ಮಿತಿ ಇದೆ.
2022 ಮತ್ತು 2024ರ ನಡುವಿನ ಅವಧಿಯಲ್ಲಿ ಗಣಿಗಾರಿಕೆ ಜಿಲ್ಲೆಗಳಲ್ಲಿ ಅದಿರು ಲಾರಿಗಳಿಂದಾಗಿ 330 ರಸ್ತೆ ಅಪಘಾತಗಳು ಮತ್ತು 126 ಸಾವುಗಳು ಸಂಭವಿಸಿವೆ ಎಂದು ಪೊಲೀಸ್ ಇಲಾಖೆಯು ಮಾಹಿತಿ ನೀಡಿರುವುದಾಗಿ ಸಿಇಸಿ ತನ್ನ ವರದಿಯಲ್ಲಿ ಹೇಳಿದೆ.
ದೈನಂದಿನ ಕಬ್ಬಿಣದ ಅದಿರು ಸಾಗಣೆಯಲ್ಲಿ ಆಗುತ್ತಿರುವ ಹೆಚ್ಚಳವು ಇದಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಗಣಿಗಾರಿಕೆ ನಡೆಯುತ್ತಿರುವ ಎಲ್ಲ ಪ್ರದೇಶಗಳಲ್ಲಿ ಪ್ರತಿದಿನ ಅಂದಾಜು 5,500 ಟ್ರಕ್‌ಗಳು (ಒಂದು ಟ್ರಿಪ್ ಮಾತ್ರ) ಸಂಚರಿಸುತ್ತಿವೆ. ಲಾರಿಗಳ ವಿಪರೀತ ಸಂಚಾರದಿಂದಾಗಿ ಈ ಪ್ರದೇಶ 2011ರ ಅಕ್ರಮ ಗಣಿಗಾರಿಕೆ ಹಂತಕ್ಕೆ ಜಾರು ಸಾಧ್ಯತೆಗಳಿರುವ ಬಗ್ಗೆಯೂ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ, ರಸ್ತೆಗಳಲ್ಲಿ ಮೇಲೆ ವಿಪರೀತ ಒತ್ತಡ, ಧೂಳು ಮಾಲಿನ್ಯ ಹೆಚ್ಚಾಗುವ ಸಾಧ್ಯತೆಗಳನ್ನು ಉಲ್ಲೇಖಿಸಲಾಗಿದೆ.
‘ಗಣಿ ಪ್ರದೇಶಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಹೊರತಾಗಿಯೂ, ಕನ್ವೇಯರ್ ಬೆಲ್ಟ್‌ಗಳು, ರೈಲ್ವೆ ಸೈಡಿಂಗ್‌ಗಳು ಮತ್ತು ಸಂಯೋಜಿತ ಸಾರಿಗೆ ಕಾರಿಡಾರ್‌ಗಳು ಅನುಷ್ಠಾನವಾಗಿಲ್ಲ’ ಎಂದು ವರದಿ ಹೇಳಿದೆ. ಜೆಎಸ್‌ಡಬ್ಲ್ಯೂ ನ ಭಾಗಶಃ ಕನ್ವೇಯರ್ ಬೆಲ್ಟ್ ಮತ್ತು ನಂದಿಹಳ್ಳಿ ರೈಲ್ವೆ ಸೈಡಿಂಗ್‌ಗಳನ್ನು ಹೊರತುಪಡಿಸಿದರೆ, ಸಾಗಣೆ ಜಾಲ ಅಭಿವೃದ್ಧಿಯಾಗಿಲ್ಲ. ಅದಿರು ಮಿತಿಯನ್ನು ಹೆಚ್ಚಿಸಿದರೆ, ಅದರ ಸಾಗಣೆಗೆ ಈ ಮೂಲಸೌಕರ್ಯ ಸಾಲದಾಗುತ್ತದೆ. ಆಗ ಅದಿರು ಲಾರಿಗಳ ಓಡಾಟ ಮತ್ತಷ್ಟು ಹೆಚ್ಚುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳಿಗೆಂದು ಪ್ರಸ್ತಾಪಿಸಲಾದ ‘ಭಾರತೀಯ ರಸ್ತೆ ಕಾಂಗ್ರೆಸ್ (ಐಆರ್‌ಸಿ)’ ಮಾರ್ಗಸೂಚಿಗಳನ್ನು ಡಾಂಬರು ಹಾಕದ ಗಣಿ ರಸ್ತೆಗಳು ಮತ್ತು ಹಳ್ಳಿ ಮಾರ್ಗಗಳಿಗೆ ಅನ್ವಯಿಸುವುದು ಬೇಡ ಎಂಬ ಅಭಿಪ್ರಾಯವನ್ನೂ ಸಿಇಸಿ ನೀಡಿದೆ. ‘ಈ ವಲಯಗಳಲ್ಲಿನ ರಸ್ತೆಗಳನ್ನು ಗಣಿಗಾರಿಕೆ ಟ್ರಕ್‌ಗಳ ಓಡಾಟಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿಲ್ಲ’ ಎಂದೂ ಉಲ್ಲೇಖಿಸಿದೆ.
ಇದರ ಜತೆಗೆ, ಹಲವಾರು ಗಣಿಗಳಲ್ಲಿನ ವಾಯು ಮಾಲಿನ್ಯದ ಮಟ್ಟವು ಒಂದು ದಶಕದಿಂದ ಸುರಕ್ಷಿತ ಮಿತಿಗಳನ್ನು ಮೀರಿದೆ. ಹೀಗಾಗಿ, ಅದಿರು ಸಾಗಾಟದ ದಾರಿಯಲ್ಲಿನ ಸಮುದಾಯಗಳಿಗೆ ಆರೋಗ್ಯದ ಅಪಾಯಗಳು ಹೆಚ್ಚುತ್ತಿವೆ. ಚಿತ್ರದುರ್ಗದ ವೇದಾಂತ, ಆರ್. ಪ್ರವೀಣ್ ಚಂದ್ರ ಮತ್ತು ಜೆಎಸ್‌ಡಬ್ಲ್ಯೂವಿನ ಗಣಿಗಳಲ್ಲಿ ತೀವ್ರತರವಾದ ಮಾಲಿನ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಗಣಿ ಲಾರಿಗಳ ಅಬ್ಬರ ಹೆಚ್ಚಾಗುತ್ತಲೇ ಇದೆ. ಧೂಳು ಕುಡಿದು ಜೀವಿಸುವಂತಾಗಿದೆ. ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ. ಎಷ್ಟೇ ಮನವಿ ಕೊಟ್ಟರೂ ನಮ್ಮ ಸಮಸ್ಯೆಗಳು ನಿವಾರಣೆಯಾಗಿಲ್ಲ.ಮೌನೇಶ್, ಕರ್ನಾಟಕ ರಾಜ್ಯ ರೈತ ಸಂಘ, ಕಾರ್ಯಾಧ್ಯಕ್ಷ, ಸಂಡೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.