ADVERTISEMENT

ಸ್ವಸಹಾಯ ಸಂಘಕ್ಕೆ ₹20 ಕೋಟಿ ಸಾಲ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಚಂದ್ರಶೇಖರಯ್ಯ ಘೋಷಣೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 12:04 IST
Last Updated 12 ಸೆಪ್ಟೆಂಬರ್ 2019, 12:04 IST
ಹೊಸಪೇಟೆಯಲ್ಲಿ ಗುರುವಾರ ನಡೆದ ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಜನ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಸದಸ್ಯರು ಹಾಗೂ ಸಿಬ್ಬಂದಿ–ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಗುರುವಾರ ನಡೆದ ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಜನ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಸದಸ್ಯರು ಹಾಗೂ ಸಿಬ್ಬಂದಿ–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘2019–20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 118 ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಗುಂಪುಗಳ ರಚನೆ ಮಾಡುವ ಗುರಿ ಹೊಂದಲಾಗಿದ್ದು, ಅವುಗಳಿಗೆ ₹20 ಕೋಟಿ ಸಾಲ ನೀಡಲು ತೀರ್ಮಾನಿಸಲಾಗಿದೆ’ ಎಂದು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಟಿ.ಎಂ. ಚಂದ್ರಶೇಖರಯ್ಯ ಘೋಷಿಸಿದರು.

ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಬ್ಯಾಂಕಿನ ವಾರ್ಷಿಕ ಮಹಾಜನ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ರೈತರಿಗೆ ₹450 ಕೋಟಿ ಅಲ್ಪಾವಧಿ ಬೆಳೆ ಸಾಲ, ₹20 ಕೋಟಿ ಮಧ್ಯಮ ಅವಧಿ ಸಾಲ, 8,000 ಹೊಸ ರೈತ ಸದಸ್ಯರಿಗೆ ₹50 ಕೋಟಿ ಬೆಳೆ ಸಾಲ ವಿತರಿಸಲಾಗುವುದು’ ಎಂದು ಹೇಳಿದರು.

‘₹300 ಕೋಟಿ ಕೃಷಿಯೇತರ ಸಾಲ, ಬ್ಯಾಂಕಿನ ಹಡಗಲಿ ಶಾಖೆಯನ್ನು ₹40 ಲಕ್ಷದಲ್ಲಿ ನವೀಕರಣಗೊಳಿಸಲಾಗುವುದು. ಕೂಡ್ಲಿಗಿಯಲ್ಲಿ ಹೊಸ ಶಾಖೆಯನ್ನು ₹1.50ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಈಗಾಗಲೇ ಒಟ್ಟು ಏಳು ಎ.ಟಿ.ಎಂ. ಕೌಂಟರ್‌ ಆರಂಭಿಸಲಾಗಿದ್ದು, ಹೊಸದಾಗಿ ಐದು ಹೊಸ ಎ.ಟಿ.ಎಂ. ಕೌಂಟರ್ ತೆರೆಯಲಾಗುವುದು’ ಎಂದು ತಿಳಿಸಿದರು.

ADVERTISEMENT

‘2018–19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 48,785 ರೈತರಿಗೆ ₹3 ಲಕ್ಷದ ವರೆಗೆ ಶೂನ್ಯ ಬಡ್ಡಿ ದರದಲ್ಲಿ ₹359.62 ಕೋಟಿ ಅಲ್ಪಾವಧಿ ಕೃಷಿ ಬೆಳೆ ಸಾಲ, 481 ರೈತರಿಗೆ ₹10 ಲಕ್ಷದ ವರೆಗೆ ಶೇ 3ರ ಬಡ್ಡಿ ದರಲ್ಲಿ ₹18.72 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ. ₹289.95 ಕೋಟಿ ಕೃಷಿಯೇತರ ಸಾಲವನ್ನು ಕೊಡಲಾಗಿದೆ. ಮಾರ್ಚ್‌ ಅಂತ್ಯಕ್ಕೆ ಒಟ್ಟು ₹909.91 ಕೋಟಿ ಠೇವಣಿ ಸಂಗ್ರಹವಾಗಿದೆ’ ಎಂದರು.

‘ಸದ್ಯ ಬ್ಯಾಂಕಿನ ಅಡಿಯಲ್ಲಿ 620 ವಿವಿಧ ಸಹಕಾರ ಸಂಘಗಳನ್ನು ಒಳಗೊಂಡಂತೆ ಒಟ್ಟು 620 ಸದಸ್ಯರಿದ್ದಾರೆ. ₹52.88 ಕೋಟಿ ಷೇರು ಬಂಡವಾಳ ಸಂಗ್ರಹವಾಗಿದೆ. ₹67.62 ಕೋಟಿ ಕಾಯ್ದಿಟ್ಟ ಹಾಘೂ ಇತರೆ ಇಧಿಗಳನ್ನು ಹೊಂದಿದೆ. ಒಟ್ಟು ₹120.50 ಕೋಟಿ ಸ್ವಂತ ಬಂಡವಾಳ ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಪೆಕ್ಸ್‌ ಸೇರಿದಂತೆ ಇತರೆ ವಾಣಿಜ್ಯ ಬ್ಯಾಂಕುಗಳಲ್ಲಿ ₹444.56 ಕೋಟಿ ಹೂಡಿಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಕುಬೇರಪ್ಪ, ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ, ನಿರ್ದೇಶಕರಾದ ಜೆ.ಎಂ. ವೃಷಬೇಂದ್ರಯ್ಯ, ಕೋಳೂರು ಮಲ್ಲಿಕರ್ಜುನಗೌಡ, ಡಿ. ಭೊಗಾರೆಡ್ಡಿ, ಎಂ. ಗುರುಸಿದದನಗೌಡ, ಎಲ್‌.ಎಸ್‌. ಆನಂದ, ಕೆ.ಎಂ. ಗಂಗಾಧರ, ಕೆ. ರವೀಂದ್ರನಾಥ, ಚಿದಾನಂದಪ್ಪ ಐಗೋಳ, ಜೆ.ಎಂ. ಗಂಗಾಧರ, ಸಿ. ಎರ್ರಿಸ್ವಾಮಿ, ಬ್ಯಾಂಕಿನ ನೌಕರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.