ADVERTISEMENT

ಆಯಿಲ್‌, ಗ್ರೀಸ್‌ ಕದಿಯುತ್ತಿದ್ದ ಮೂವರ ಬಂಧನ: ₹31 ಲಕ್ಷ ಮೌಲ್ಯದ ಆಯಿಲ್‌ ವಶ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 13:30 IST
Last Updated 25 ಆಗಸ್ಟ್ 2022, 13:30 IST
ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಗುರುವಾರ ಆಯಿಲ್‌, ಗ್ರೀಸ್‌ ಹಾಗೂ ಬೊಲೊರೊ ವಾಹನ ವಶಪಡಿಸಿಕೊಂಡರು
ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಗುರುವಾರ ಆಯಿಲ್‌, ಗ್ರೀಸ್‌ ಹಾಗೂ ಬೊಲೊರೊ ವಾಹನ ವಶಪಡಿಸಿಕೊಂಡರು   

ಹೊಸಪೇಟೆ (ವಿಜಯನಗರ): ಆಯಿಲ್‌, ಗ್ರೀಸ್‌ ಕದಿಯುತ್ತಿದ್ದ ಆರೋಪದ ಮೇರೆಗೆ ಮೂವರನ್ನು ವಶಕ್ಕೆ ಪಡೆದಿರುವ ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಅವರಿಂದ ₹31.59 ಲಕ್ಷ ಮೌಲ್ಯದ ವಸ್ತುಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಜಯನಗರದ ಮಂಜುನಾಥ ಕೆ. (30), ಮುಸ್ತಾಕ್‌ ಇಬ್ರಾಹಿಂ (25) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಕೊಪ್ಪ ಕಾಟೇನಹಳ್ಳಿ ಗ್ರಾಮದ ಸಿ. ಗಜೇಂದ್ರ ಚೆನ್ನಪ್ಪ (29) ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಗರ ಹೊರವಲಯದ ಜಂಬುನಾಥಹಳ್ಳಿ ಬಳಿ ಸಂಗ್ರಹಿಸಿ ಬಚ್ಚಿಟ್ಟಿದ್ದ ₹16 ಲಕ್ಷ ಮೌಲ್ಯದ 70 ಬ್ಯಾರಲ್‌ ಟ್ರಾನ್ಸಫಾರ್ಮರ್‌ ಆಯಿಲ್‌, ₹8.50 ಲಕ್ಷದ 17 ಬ್ಯಾರಲ್‌ ಗ್ರೀಸ್‌ ಹಾಗೂ ₹7 ಲಕ್ಷ ಮೌಲ್ಯದ ಮಹೇಂದ್ರ ಬೊಲೊರೆ ಗೂಡ್ಸ್‌ ವಾಹನ ವಶಪಡಿಸಿಕೊಂಡಿದ್ದಾರೆ.

‘ಆಯಿಲ್‌, ಗ್ರೀಸ್‌ ಬ್ಯಾರಲ್‌ ಕದ್ದೊಯ್ದಿದ ಬಗ್ಗೆ ಬಸವೇಶ್ವರ ಬಡಾವಣೆಯ ಸುಲೇಖೆರಾಜು ನರಸಿಂಗಯ್ಯ ರಾವ್‌ ಎಂಬುವರು ಬುಧವಾರ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಏಪ್ರಿಲ್‌ನಿಂದ ವಿವಿಧ ಕಡೆ ಆಯಿಲ್‌, ಗ್ರೀಸ್‌ ಕದ್ದು ಸಂಗ್ರಹಿಸಿ ಇಟ್ಟಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ತಿಳಿಸಿದ್ದಾರೆ.

ADVERTISEMENT

ಡಿವೈಎಸ್ಪಿ ವಿಶ್ವನಾಥರಾವ್‌ ಕುಲಕರ್ಣಿ, ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ ಮೇಟಿ, ಸಿಬ್ಬಂದಿ ಮಂಜುನಾಥ ಮೇಟಿ, ಕೊಟ್ರೇಶ ಜೆ., ಅಡಿವೆಪ್ಪ ಕಬ್ಬಳ್ಳಿ, ಸಣ್ಣ ಗಾಳೆಪ್ಪ, ಕೊಟ್ರೇಶ ಎ., ಚಂದ್ರಪ್ಪ ಬಿ., ನಾಗರಾಜ ಬಿ., ಸಂತೋಷ್‌ಕುಮಾರ್‌, ಅಬ್ದುಲ್‌ ನಜೀರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.