ADVERTISEMENT

ಕಮಲಾಪುರ ಪಟ್ಟಣ ಪಂಚಾಯಿತಿ: ಒಂದೇ ದಿನ 31 ನಾಮಪತ್ರ ಸಲ್ಲಿಕೆ

ಶಕ್ತಿ ಪ್ರದರ್ಶನ ಮಾಡಿದ ಕಾಂಗ್ರೆಸ್ಸಿಗರು; ಉಮೇದುವಾರಿಕೆ ಸಲ್ಲಿಸಲು ಇಂದು ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 15 ಮೇ 2019, 12:28 IST
Last Updated 15 ಮೇ 2019, 12:28 IST
ಕಾಂಗ್ರೆಸ್‌ನ ಹತ್ತು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಕಮಲಾಪುರ ಪಟ್ಟಣದಲ್ಲಿ ಶಕ್ತಿ ಪ್ರದರ್ಶನ ಮಾಡಿದರು–ಪ್ರಜಾವಾಣಿ ಚಿತ್ರ
ಕಾಂಗ್ರೆಸ್‌ನ ಹತ್ತು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಕಮಲಾಪುರ ಪಟ್ಟಣದಲ್ಲಿ ಶಕ್ತಿ ಪ್ರದರ್ಶನ ಮಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದ್ದು, ಬುಧವಾರ 31 ಜನ ಉಮೇದುವಾರಿಕೆ ಸಲ್ಲಿಸಿದರು.

ಬುಧವಾರ ಕಾಂಗ್ರೆಸ್ಸಿನಿಂದ ಒಟ್ಟು 14 ಜನ ನಾಮಪತ್ರ ಸಲ್ಲಿಸಿದರು. ಈ ಪೈಕಿ ಹತ್ತು ಜನ ಅಭ್ಯರ್ಥಿಗಳಷ್ಟೇ ಪಕ್ಷದ ‘ಬಿ’ ಫಾರಂ ನೀಡಿದ್ದಾರೆ. ಬಿಜೆಪಿಯಿಂದ ಎಂಟು ಜನ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇನ್ನು ಒಂಬತ್ತು ಜನ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.

ಮಂಗಳವಾರ ಬಿಜೆಪಿಯಿಂದ ಇಬ್ಬರು, ಸೋಮವಾರ ಒಬ್ಬರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಇದುವರೆಗೆ ಒಟ್ಟು 34 ಜನ ನಾಮಪತ್ರ ಸಲ್ಲಿಸಿದಂತಾಗಿದೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ADVERTISEMENT

ಶಕ್ತಿ ಪ್ರದರ್ಶನ:

ಕಾಂಗ್ರೆಸ್‌ನ ಹತ್ತು ಜನ ಅಭ್ಯರ್ಥಿಗಳು ಶಕ್ತಿ ಪ್ರದರ್ಶನದ ಮೂಲಕ ಬುಧವಾರ ನಾಮಪತ್ರ ಸಲ್ಲಿಸಿದರು. ಶಾಸಕ ಆನಂದ್‌ ಸಿಂಗ್‌ ಅವರ ರಜಪೂತ ಕೋಟೆಯಿಂದ ಪಟ್ಟಣದ ಪ್ರಮುಖ ಮಾರ್ಗಗಳಿಂದ ಪಟ್ಟಣ ಪಂಚಾಯಿತಿ ವರೆಗೆ ಮೆರವಣಿಗೆಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ರ್‍ಯಾಲಿಯಲ್ಲಿ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಪಾಲ್ಗೊಂಡಿದ್ದರು. ಶಾಸಕ ಆನಂದ್‌ ಸಿಂಗ್‌ ಕ್ಷೇತ್ರದಲ್ಲೇ ಇದ್ದರೂ ರ್‍ಯಾಲಿಯಲ್ಲಿ ಕಾಣಿಸಿಕೊಳ್ಳಲಿಲ್ಲ.

ಮಾಜಿ ಶಾಸಕ ರತನ್ ಸಿಂಗ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಮಾಜಿ ಹೇಮಣ್ಣ, ಟಿಂಕರ್‌ ರಫೀಕ್, ಮುಖಂಡರಾದ ಸಮೀವುಲ್ಲಾ, ಅಂಗಡಿ ನಾಗರಾಜ, ರಾಮರೆಡ್ಡಿ , ಮುಕ್ತಿಯಾರ್‌ ಪಾಷ, ಓಬಯ್ಯ, ಶೋಯಬ್‌, ಎಚ್. ಸೋಮಶೇಖರ್, ಡಿ.ಬಿ.ಆರ್ ಮಳಲಿ ಗೋಪಾಲ ಕೃಷ್ಣ, ತಮ್ಮನಳ್ಳೆಪ್ಪ, ನಿಂಬಗಲ್‌ ರಾಮಕೃಷ್ಣ, ಜೀವರತ್ನಂ, ಎನ್.ವೆಂಕಟೇಶ್, ನವೀನ್, ಜಾಕೀರ್, ಫಿರೋಜ್, ಗೌಸ್, ಷಣ್ಮುಖ, ಜಂಬಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.