ಬಳ್ಳಾರಿ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅನಧಿಕೃತ ಬಡಾವಣೆ ಹಾಗೂ ನಕ್ಷೆ ಇಲ್ಲದೆ ನಿರ್ಮಿಸಿದ ಕಟ್ಟಡಗಳಿಗೆ ಬಿ. ಖಾತೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರಂತೆ ಜಿಲ್ಲೆಯಲ್ಲಿ 46,725 ಅನಧಿಕೃತ ಆಸ್ತಿಗಳು ಈಗ ಬಿ.ಖಾತೆ ನಿರೀಕ್ಷೆಯಲ್ಲಿವೆ.
ಜಿಲ್ಲಾ ಕೇಂದ್ರ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಸ್ವತ್ತುಗಳ ಸಂಖ್ಯೆ ಹೆಚ್ಚಾಗಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ 30,906 ಸ್ವತ್ತುಗಳು ಖಾತೆ ಹೊಂದಿಲ್ಲ. ಬಳ್ಳಾರಿ ಪಾಲಿಕೆ ನಂತರದ ಸ್ಥಾನದಲ್ಲಿ ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ 4,950 ಅನಧಿಕೃತ ಸ್ವತ್ತುಗಳು ಬಿ.ಖಾತೆಗೆ ಎದುರು ನೋಡುತ್ತಿವೆ. ಮೂರನೇ ಸ್ಥಾನದಲ್ಲಿ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 3,952 ಸ್ವತ್ತುಗಳು ಬಿ.ಖಾತೆಗಾಗಿ ಕಾಯುತ್ತಿವೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಸ್ವತ್ತುಗಳಿಂದ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಕಟ್ಟಡ ಹಾಗೂ ಬಡಾವಣೆಗಳಿಗೆ ಬಿ.ಖಾತೆ ನೀಡಲು ನಿರ್ಧರಿಸಿದೆ. ಅನಧಿಕೃತವಾಗಿರುವ ಸ್ವತ್ತುಗಳಿಗೆ ನಗರಸಭೆಯಿಂದ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಆದರೆ ತೆರಿಗೆ ಪಾವತಿಯಿಲ್ಲದ ಕಾರಣ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವಾಗುತ್ತಿದೆ.
ಖಾತೆ ದೊರೆಯದೆ ಹಲವು ವರ್ಷಗಳಿಂದ ಅನಧಿಕೃತವಾಗಿಯೆ ಉಳಿದಿರುವ ಆಸ್ತಿ ಮಾಲೀಕರಿಗೆ ಈಗ ತಮ್ಮ ಸ್ವತ್ತುಗಳಿಗೆ ಕನಿಷ್ಠ ಬಿ.ಖಾತೆ ಆದರೂ ಸಿಗಲಿದೆ ಎನ್ನುವ ಸಂತಸವಿದೆ. ಮತ್ತೊಂದು ಕಡೆ ಹಲವು ವರ್ಷಗಳಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿದ್ದರೂ ತೆರಿಗೆ ಸಂಗ್ರಹವಾಗದೆ ಕುಡಿಯುವ ನೀರು, ಚರಂಡಿ, ಒಳಚರಂಡಿ, ಬೀದಿ ದೀಪಗಳು ಮತ್ತಿತರ ಮೂಲ ಸೌಕರ್ಯವನ್ನು ಉಚಿತವಾಗಿ ನೀಡುತ್ತಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಬಿ.ಖಾತೆ ಬಳಿಕ ತೆರಿಗೆ ಸಂಗ್ರಹಕ್ಕೆ ರಹದಾರಿ ಆಗಲಿದೆ.
ಸದ್ಯ ರಾಜ್ಯದಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಸುಮಾರು 34.35 ಲಕ್ಷಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳಾಗಿವೆ. ಈ ಸ್ವತ್ತುಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಸೇರಿದಂತೆ ಮೂಲಭೂತ ಸೌರ್ಕಯವನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಕಲ್ಪಿಸಲಾಗುತ್ತಿದ್ದರೂ ತೆರಿಗೆ ವಿಧಿಸಲು ಅವಕಾಶ ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.