ADVERTISEMENT

ಹುತಾತ್ಮರ ಸ್ಮಾರಕ ಅಭಿವೃದ್ಧಿಗೆ ಚಾಲನೆ ಇಂದು

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 9:12 IST
Last Updated 30 ಜನವರಿ 2018, 9:12 IST
ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿರುವ ಗಾಂಧಿ ಚಿತಾ ಭಸ್ಮವಿರುವ ಹುತಾತ್ಮರ ಸ್ಮಾರಕ
ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿರುವ ಗಾಂಧಿ ಚಿತಾ ಭಸ್ಮವಿರುವ ಹುತಾತ್ಮರ ಸ್ಮಾರಕ   

ಕೂಡ್ಲಿಗಿ: ರಾಜ್ಯ ಸರ್ಕಾರ ₹ 2 ಕೋಟಿ ಅನುದಾನ ಮಂಜೂರು ಮಾಡುವ ಮೂಲಕ ಪಟ್ಟಣದ ಗಾಂಧೀಜಿ ಚಿತಾ ಭಸ್ಮವಿರುವ ಹುತಾತ್ಮರ ರಾಷ್ಟ್ರೀಯ ಸ್ಮಾರಕವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿದೆ.

ಮಂಗಳವಾರ ನಡೆಯಲಿರುವ ಹುತಾತ್ಮರ ದಿನಾಚರಣೆಯಲ್ಲೇ ಅಭಿವೃದ್ಧಿ ಕಾರ್ಯಕ್ಕೆ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಚಾಲನೆ ನೀಡಲಿದ್ದಾರೆ. ಈ ವಿಷಯವನ್ನು ಗಾಂಧಿ ಸ್ಮಾರಕ ಸಮಿತಿಯ ಸದಸ್ಯ ಡಿ.ನಾಗರಾಜ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

‘ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಈ ವಿಷಯವನ್ನು ತಿಳಿಸಿದರು’ ಎಂದಿದ್ದಾರೆ.

ADVERTISEMENT

ಈ ಮೊದಲು ಸುಮಾರು ₹59 ಲಕ್ಷ ವೆಚ್ಚದಲ್ಲಿ ಸ್ಮಾರಕದ ಪಶ್ಚಿಮ ಭಾಗದಲ್ಲಿ ಉದ್ಯಾನ ನಿರ್ಮಾಣದ ಜೊತೆಗೆ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಾಗಿತ್ತು, ₹ 20 ಲಕ್ಷ ವೆಚ್ಚದಲ್ಲಿ ಗ್ರಾನೈಟ್ ಗೋಳವನ್ನು ಸ್ಥಾಪಿಸ ಲಾಗಿತ್ತು. ಈ ಹಿಂದೆ ಇಲ್ಲಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಮಾರಕದ ಅಭಿವೃದ್ಧಿಗಾಗಿ ಒತ್ತಾಯಿಸಿ ಮುಖಂಡರು ಮನವಿ ಸಲ್ಲಿಸಿದ್ದರು.

ಅವರಿಗೆ ಸ್ಪಂದಿಸಿದ ಅವರು, ಸ್ಮಾರಕದ ಹೆಚ್ಚಿನ ಅಭಿವೃದ್ಧಿ ಮತ್ತು ಸ್ವಾತಂತ್ರ್ಯ ಭವನದ ನಿರ್ಮಾಣದ ನಕಾಶೆ ಹಾಗೂ ವೆಚ್ಚ ಸಿದ್ಧಪಡಿಸಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ಗೆ ಸೂಚಿಸಿದ್ದರು. ನಂತರ ಅನೇಕ ದಿನಗಳವರೆಗೂ ಈ ವಿಚಾರ ನನೆಗುದಿಗೆ ಬಿದ್ದಿತ್ತು.

‘ಈಗಿರುವ ಮೂಲ ಸ್ಮಾರಕವನ್ನು ಯಥಾ ಸ್ಥಿತಿ ಕಾಪಾಡಿಕೊಂಡು, ಕಾಂಕ್ರೀಟ್‌ ಚಾವಣಿ ತೆಗೆದು, ಎತ್ತರದ ಚಾವಣಿ ನಿರ್ಮಿಸಬೇಕು. ಸ್ಮಾರಕದ ಪೂರ್ವ ಭಾಗದಲ್ಲಿರುವ ಸ್ವಾತಂತ್ರ್ಯ ಭವನವಿರುವ ಜಾಗದಲ್ಲಿ ಉದ್ಯಾನ ನಿರ್ಮಿಸಬೇಕು. ಸರ್ಕಾರಿ ಆಸ್ಪತ್ರೆಯ ಕಡೆ ಮೈದಾನದಲ್ಲಿ ಸ್ವಾತಂತ್ರ್ಯ ಭವನ ನಿರ್ಮಿಸಬೇಕು’ ಎಂಬುದು ಗಾಂಧಿ ಸ್ಮಾರಕ ಸಮಿತಿಯ ಸದಸ್ಯ ಎ.ಎಂ. ರಾಘವೇಂದ್ರ ಅವರ ಅಭಿಪ್ರಾಯ.

* * 

ಸ್ಮಾರಕವನ್ನು ಅಭಿವೃದ್ಧಿಪಡಿಸಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವನ್ನಾಗಿಸಬೇಕು
ಡಿ. ನಾಗರಾಜ ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.