ADVERTISEMENT

ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 8:53 IST
Last Updated 10 ಫೆಬ್ರುವರಿ 2018, 8:53 IST

ಬಳ್ಳಾರಿ: ‘ರಾಜ್ಯದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಹಾಗೂ ಕ್ರೈಸ್ತ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಇವಾನ್‌ ಡಿಸೋಜಾ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

‘ನಿಗಮ ಸ್ಥಾಪಿಸಿ ಅಭಿವೃದ್ಧಿ ಕಾರ್ಯಗಳಿಗಾಗಿ ₨ 500 ಕೋಟಿ ಮೀಸಲಿಡಬೇಕು’ ಎಂದು ನಗರದಲ್ಲಿ ಶುಕ್ರವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ‘2016–17ರ ಆಯವ್ಯಯದಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ₨ 175 ಕೋಟಿಯನ್ನು ವಿನಿಯೋಗಿಸಲಾಗಿದೆ. ಬಳ್ಳಾರಿ ಜಿಲ್ಲೆಗೆ ಮೀಸಲಿದ್ದ ₨ 61.75 ಲಕ್ಷವೂ ಖರ್ಚಾಗಿದೆ’ ಎಂದರು.

‘ಆದಾಯ ತೆರಿಗೆ ದಾಳಿ ಕಾರ್ಯಾಚರಣೆಯ ಮೂಲಕ ಕಾಂಗ್ರೆಸ್‌ ಮುಖಂಡರ ವಿರುದ್ಧ ಕೇಂದ್ರ ಸರ್ಕಾರ ದ್ವೇಷ ಸಾಧಿಸುತ್ತಿದೆ. ಆದರೆ ಬಿಜೆಪಿ ಮುಖಂಡರೇನೂ ಬಿಪಿಎಲ್‌ ಕಾರ್ಡ್‌ ಉಳ್ಳವರಲ್ಲ. ಅವರ ಮೇಲೂ ಆದಾಯ ತೆರಿಗೆ ದಾಳಿ ಕಾರ್ಯಾಚರಣೆ ನಡೆಸಬೇಕು’ ಎಂದು ಆಗ್ರಹಿಸಿದರು. ಅಕ್ರಮ ಗಣಿಗಾರಿಕೆ ವಿರುದ್ಧದ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.