ADVERTISEMENT

ಬಳ್ಳಾರಿ | ಜಿಲ್ಲೆಗೆ ಬರಬೇಕು ₹78.19 ಕೋಟಿ ಬರ ಪರಿಹಾರ

ರಾಜ್ಯದಲ್ಲಿ ಬರ ನಿರ್ವಹಣೆಗೆ ಹಣಕಾಸು ನೆರವು ಬಿಡುಗಡೆಗೆ ಕೇಂದ್ರಕ್ಕೆ ಚುನಾವಣಾ ಆಯೋಗ ಅನುಮತಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 5:28 IST
Last Updated 25 ಏಪ್ರಿಲ್ 2024, 5:28 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಬಳ್ಳಾರಿ: ‘ಬರ ನಿರ್ವಹಣೆಗೆ ಹಣಕಾಸು ನೆರವು ನೀಡುವಂತೆ ಕರ್ನಾಟಕ ಸರ್ಕಾರ ಮುಂದಿಟ್ಟಿರುವ ಬೇಡಿಕೆಯನ್ನು ಈಡೇರಿಸಲು ಚುನಾವಣಾ ಆಯೋಗ ಅನುಮತಿ ನೀಡಿದೆ. ನೆರವು ನೀಡುವ ಕುರಿತು ಒಂದು ವಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು  ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಾಗ್ದಾನ ನೀಡಿದೆ. ಅದರಂತೆ ಕೇಂದ್ರದಿಂದ ಹಣ ಬಿಡುಗಡೆಯಾದರೆ, ಜಿಲ್ಲೆಯ 37,346 ರೈತರಿಗೆ ಒಟ್ಟು ₹78.19 ಕೋಟಿ ಪರಿಹಾರ ಸಿಗಲಿದೆ.

ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 1.73 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಗುರಿ ಸಾಧನೆಯಾಗಿದ್ದು ಶೇ 82ರಷ್ಟು (1.40 ಲಕ್ಷ ಹೆಕ್ಟೇರ್‌) ಮಾತ್ರ. ಬಿತ್ತನೆ ನಂತರ ಮಳೆ ತೀವ್ರ ನಿರಾಸೆಯುಂಟು ಮಾಡಿತ್ತು. ಜಿಲ್ಲೆಯಲ್ಲಿ 59.9 ಸೆಂ.ಮೀ. ವಾಡಿಕೆ ಮಳೆ. ಆದರೆ, ಸುರಿದಿದ್ದು ಮಾತ್ರ 26.6 ಸೆಂ.ಮೀ. ಹೀಗಾಗಿ ಭಾರಿ ಪ್ರಮಾಣದ ಬೆಳೆ ನಾಶಗೊಂಡಿತ್ತು.

ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 11,791.9 ಹೆಕ್ಟೇರ್‌ ಭತ್ತದ, 17,389.6 ಹೆಕ್ಟೇರ್‌ ಮೆಕ್ಕೆಜೋಳ, 22,250.5 ಹೆಕ್ಟೇರ್‌ ಹತ್ತಿ ಸೇರಿದಂತೆ ಒಟ್ಟು 68,096.65 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ಜತೆಗೆ 4,516.47 ಹೆಕ್ಟೇರ್‌ ಪ್ರದೇಶದ ತೋಟಗಾರಿಕಾ ಬೆಳೆಗಳೂ ಸೇರಿದಂತೆ ಒಟ್ಟಾರೆ 73,813.13 ಹೆಕ್ಟೇರ್‌ನಷ್ಟು ಬೆಳೆ ನಾಶವಾಗಿತ್ತು. ಜಿಲ್ಲೆಯ ಐದು ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿತ್ತು.

ADVERTISEMENT

ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಒಂದು ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶದ ಬೆಳೆಗೆ ₹8,500, ನೀರಾವರಿ ಪ್ರದೇಶದ ಒಂದು ಹೆಕ್ಟೇರ್‌ ಬೆಳೆಗೆ ₹17 ಸಾವಿರ ಮತ್ತು ತೋಟಗಾರಿಕಾ ಬೆಳೆಗೆ ₹22 ಸಾವಿರ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಬೇಕಾಗುತ್ತದೆ.

ಅದರಂತೆ ಜಿಲ್ಲೆಯ 37,346 ರೈತರಿಗೆ ಒಟ್ಟು ₹78,19,09,135 ಕೋಟಿ ಬರ ಪರಿಹಾರವಾಗಿ ಬರಬೇಕಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. 

6 ತಿಂಗಳ ಹಿಂದೆ ಅಧ್ಯಯನ: ರಾಜ್ಯದಲ್ಲಿ ಭೀಕರ ಬರ ಎದುರಾದ ಹಿನ್ನೆಲೆಯಲ್ಲಿ2023ರ ಅ.7ರಂದು ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರದ ಬರ ಅಧ್ಯಯನ ತಂಡ ಸಿರಗುಪ್ಪ, ಸಂಡೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕ್ಷಾಮದ ತೀವ್ರತೆಯನ್ನು ಪರಿಶೀಲಿಸಿತ್ತು. ವಿವಿಧ ಇಲಾಖೆಗಳ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿತ್ತು. ನಂತರ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡವೂ ಬಂದು ಹೋಗಿತ್ತು. ಸದ್ಯ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್ ಪಕ್ಷದ ವತಿಯಿಂದಲೂ ಜಿಲ್ಲೆಯಲ್ಲಿ ಅಧ್ಯಯನ ನಡೆದಿತ್ತು. 

ಪರಿಹಾರ ನೀಡಿದ್ದ ರಾಜ್ಯ: ರಾಜ್ಯದಲ್ಲಿ ಬರ ಆವರಿಸುತ್ತಲೇ ಅಧ್ಯಯನ ನಡೆಸಿದ್ದ ರಾಜ್ಯ ಸರ್ಕಾರ ಮೊದಲ ಹಂತದ ಪರಿಹಾರವಾಗಿ ಜಿಲ್ಲೆಯ 37,346 ರೈತರಿಗೆ ತಲಾ ₹2,000ನಂತೆ ₹7.34 ಕೋಟಿ ಹಣ ಬಿಡುಗಡೆ ಮಾಡಿತ್ತು.

ಬಳ್ಳಾರಿ ಜಿಲ್ಲೆಯ ತಾಲ್ಲೂಕುವಾರು ಬೆಳೆಹಾನಿ ವಿವರ ತಾಲ್ಲೂಕು;ಪ್ರದೇಶ (ಹೆಕ್ಟೇರ್‌ಗಳಲ್ಲಿ) ಬಳ್ಳಾರಿ;4298.29 ಕುರುಗೋಡು;260.40 ಸಿರುಗುಪ್ಪ;36281.66 ಕಂಪ್ಲಿ;656.20 ಸಂಡೂರು;26600.10 ಒಟ್ಟು;68096.65 (ಕೃಷಿ ಇಲಾಖೆಯಲ್ಲಿನ ಬೆಳೆ ಹಾನಿ ವಿವರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.