ADVERTISEMENT

ಅಪಘಾತದಲ್ಲಿ ಬೈಕ್ ಸವಾರ ಸಾವು: ದಿಢೀರ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 2:12 IST
Last Updated 18 ಸೆಪ್ಟೆಂಬರ್ 2021, 2:12 IST
ಮರಿಯಮ್ಮನಹಳ್ಳಿ ಸಮೀಪದ ಹಾರುವನಹಳ್ಳಿ ಬಳಿಯ ರಾ.ಹೆ.50ರ ಬಳಿ ಶುಕ್ರವಾರ ಸಂಜೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದರು
ಮರಿಯಮ್ಮನಹಳ್ಳಿ ಸಮೀಪದ ಹಾರುವನಹಳ್ಳಿ ಬಳಿಯ ರಾ.ಹೆ.50ರ ಬಳಿ ಶುಕ್ರವಾರ ಸಂಜೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದರು   

ಮರಿಯಮ್ಮನಹಳ್ಳಿ: ಸಮೀಪದ ಹಾರುವನಹಳ್ಳಿ ಗ್ರಾಮದ ಬಳಿಯ ರಾ.ಹೆ.50ರ ಯು ಟರ್ನ್‌ನಲ್ಲಿ ಶುಕ್ರವಾರ ಸಂಜೆ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಹಾರುವನಹಳ್ಳಿ ಗ್ರಾಮದ ಬೈಕ್ ಸವಾರ ಶಿವಕುಮಾರ್ (20) ಮೃತಪಟ್ಟ ಯುವಕ.

ಶಿವಕುಮಾರ್ ಅವರು ಬೈಕ್ ಮೇಲೆ ಚಿಲಕನಹಟ್ಟಿ ಗ್ರಾಮದಿಂದ ಹಾರುವನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಶಿವಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಪೊಲೀಸರು ತಿಳಿಸಿದ್ದಾರೆ.

ದಿಢೀರ್ ಪ್ರತಿಭಟನೆ: ಘಟನೆ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ಗ್ರಾಮಸ್ಥರು ಹೆದ್ದಾರಿಯಲ್ಲಿ ಶವವನ್ನು ಸಾಗಿಸಲು ಬಿಡದೆ, ವಾಹನಗಳನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ADVERTISEMENT

ಇದೇ ಯು ಟರ್ನ್ ಸ್ಥಳದಲ್ಲಿ ತಿಂಗಳೊಂದರಲ್ಲಿ ನಡೆದ ಮೂರು– ಮಾಲ್ಕು ಅಪಘಾತಗಳಲ್ಲಿ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ, ಇಲ್ಲಿ ಯಾವುದೇ ರೀತಿಯ ಫ್ಲೈಓವರ್‌ ಹಾಗೂ ಸರ್ವಿಸ್ ರಸ್ತೆ ಇಲ್ಲದಿರುವುದು ಕಾರಣ ಎಂದು ಆರೋಪಿಸಿ ಸ್ಥಳಕ್ಕೆ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು.

ನಂತರ ಸ್ಥಳಕ್ಕೆ ಆಗಮಿಸಿದ ಕೂಡ್ಲಿಗಿ ಸಿಪಿಐ ವಸಂತ ಅಸೋದೆ, ಪಿಎಸ್‌ಐಗಳಾದ ಹನುಮಂತಪ್ಪ ತಳವಾರ ಹಾಗೂ ಬಿ.ಮೀನಾಕ್ಷಿ ಅವರು ಮನವೊಲಿಸಲು ಯತ್ನಿಸಿದರೂ ಕೇಳದ ಪ್ರತಿಭಟನಾಕಾರರು ರಾತ್ರಿ 8 ಗಂಟೆಯವರೆಗೆ ಪ್ರತಿಭಟನೆ ಮುಂದುವರೆಸಿದರು. ಇದರಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳು ಸಾಳುಗಟ್ಟಿದ್ದವು.

ನಂತರ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ ಹಾಗೂ ತಹಶೀಲ್ದಾರ್ ಎಚ್.ವಿಶ್ವನಾಥ ಅವರು ಸಮಸ್ಯೆ ಆಲಿಸಿದರು. ನಂತರ ಇಲ್ಲಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಈ ಬಗ್ಗೆ ಬುಧವಾರ ಗ್ರಾಮದಲ್ಲಿ ಸಾರ್ವಜನಿಕ ಸಭೆ ಕರೆದು ಚರ್ಚಿಸಲಾಗುವದೆಂದು ತಿಳಿಸಿದರು. ನಂತರ ಪ್ರತಿಭಟನೆ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.