ADVERTISEMENT

ಕೇಂದ್ರದ ನೀತಿ ವಿರುದ್ಧ ಹೋರಾಡಲು ಸಲಹೆ

ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 11 ಮೇ 2025, 16:29 IST
Last Updated 11 ಮೇ 2025, 16:29 IST
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ (ಜೆಸಿಟಿಯು) ಮೇ 20ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪೂರ್ವಭಾವಿಯಾಗಿ ಶನಿವಾರ ಬಳ್ಳಾರಿಯ ಗಾಂಧಿ ಭವನದಲ್ಲಿ ಕಾರ್ಮಿಕ ಸಮಾವೇಶ ನಡೆಯಿತು. 
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ (ಜೆಸಿಟಿಯು) ಮೇ 20ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪೂರ್ವಭಾವಿಯಾಗಿ ಶನಿವಾರ ಬಳ್ಳಾರಿಯ ಗಾಂಧಿ ಭವನದಲ್ಲಿ ಕಾರ್ಮಿಕ ಸಮಾವೇಶ ನಡೆಯಿತು.    

ಬಳ್ಳಾರಿ: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ (ಜೆಸಿಟಿಯು) ಮೇ 20ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪೂರ್ವಭಾವಿಯಾಗಿ ಶನಿವಾರ ಗಾಂಧಿ ಭವನದಲ್ಲಿ ಕಾರ್ಮಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸತ್ಯ ಬಾಬು ‘ಕೇಂದ್ರ ಸರ್ಕಾರ ಕಾರ್ಮಿಕ ಪರವಾದ 29 ಕಾನೂನುಗಳನ್ನು ತಿದ್ದುಪಡಿ ಮಾಡಿ, 4 ಲೇಬರ್ ಕೋಡ್ ಜಾರಿಗೆ ತರುತ್ತಿದೆ. ಇದರ ವಿರುದ್ಧ ಪ್ರಬಲ ಜಂಟಿ ಕಾರ್ಮಿಕ ಹೋರಾಟ ಬಲಪಡಿಸಬೇಕು. ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಬೇಕು’ ಎಂದು ಸಲಹೆ ನೀಡಿದರು.

ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ್ ಗೌಡ ಮಾತನಾಡಿ, ‘ಕಾರ್ಮಿಕರು ಆರ್ಥಿಕ ಬೇಡಿಕೆಗಳಿಗೆ ಮಾತ್ರ ಸೀಮಿತವಾಗದೆ, ಶೋಷಕ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧದ ಹೋರಾಟ ತೀವ್ರಗೊಳಿಸಬೇಕು. ಇಡೀ ಕಾರ್ಮಿಕ ವರ್ಗ ಒಂದು ಎನ್ನುವ ಭಾವನೆ ಎಲ್ಲರಲ್ಲೂ ಮೂಡಬೇಕು. ಜಾತಿ, ಧರ್ಮ, ಭಾಷೆ ಹೆಸರಲ್ಲಿ ಕಾರ್ಮಿಕರನ್ನು ಒಡೆದು ಆಳುವ ಬಂಡವಾಳಶಾಹಿ ವರ್ಗ ಹಾಗೂ ಅವರ ಸರ್ಕಾರಗಳ ಪಿತೂರಿಯನ್ನು ಸೋಲಿಸಬೇಕು’ ಎಂದರು.

ADVERTISEMENT

ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಆದಿಮೂರ್ತಿ ಮಾತನಾಡಿ, ‘ಜನರ ತೆರಿಗೆ ಹಣದಿಂದ ಕಟ್ಟಿದ  ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾರ್ಮಿಕ ಮುಖಂಡ ಟಿ.ಜಿ ವಿಠ್ಠಲ್ ಮಾತನಾಡಿ ‘ದುಡಿಯುವ ಜನರ ಮೇಲೆ ಗುಲಾಮಗಿರಿಯ ಷರತ್ತು ಹೇರುವ ಸಮಗ್ರ ನೀಲನಕ್ಷೆಗೆ ಸರ್ಕಾರ ಮುಂದಡಿಯಿಡುತ್ತಿದೆ’ ಎಂದರು. 

ಅಖಿಲ ಭಾರತ ವಿಮಾ ನೌಕರ ಸಂಘದ ಸೂರ್ಯ ನಾರಾಯಣ ‘ಎಲ್ಐಸಿ ವಿಮೆಯ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆದುಕೊಳ್ಳುತ್ತಾ, ಖಾಸಗೀಕರಣ ಮಾಡಲು ಹೊರಟಿದೆ. ಇದರ ವಿರುದ್ಧ ನಾವೆಲ್ಲ ಧ್ವನಿ ಎತ್ತಬೇಕು. ಅಖಿಲ ಭಾರತ ಮುಷ್ಕರ ಯಶಸ್ವಿಗೊಳಿಸಬೇಕು’ ಎಂದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚೆನ್ನಬಸಯ್ಯ, ಗ್ರಾಮೀಣ ಬ್ಯಾಂಕ್ ನೌಕರರ ಯುನಿಯನ್ ಮುಖಂಡ ಮಲ್ಲಿಕಾರ್ಜುನ, ಮಧುಕುಂಟಿ, ಕೆ.ಎಸ್.ಆರ್.ಟಿ.ಸಿ ನೌಕರರ ಸಂಘದ ಚೆನ್ನಪ್ಪ, ಸರ್ಕಾರಿ ನೌಕರರ ಒಕ್ಕೂಟದ ರಿಜ್ವಾನ್, ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಸಂಘದ ವೇಣುಗೋಪಾಲ್ ಶೆಟ್ಟಿ, ಮಹಾಂತಯ್ಯ ಮತ್ತಿತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.