ADVERTISEMENT

ಸಮಿತಿ ತೀರ್ಮಾನ ವಿಳಂಬ: ರೈತ ಕಂಗಾಲು; ಜಲಾಶಯದಿಂದ ನೀರು ಹರಿಸಲು ಒತ್ತಾಯ

ತುಂಗಭದ್ರಾ ಜಲಾಶಯದಿಂದ ನೀರು ಹರಿಸಲು ರೈತರು, ನೀರಾವರಿ ತಜ್ಞರ ಒತ್ತಾಯ

ಆರ್. ಹರಿಶಂಕರ್
Published 19 ಜೂನ್ 2025, 6:50 IST
Last Updated 19 ಜೂನ್ 2025, 6:50 IST
govindalu 
govindalu    

ಬಳ್ಳಾರಿ: ಹದವಾದ ಮಳೆ, ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹಣೆ, ಒಳಹರಿವು ಎಲ್ಲವೂ ಇದೆ. ಆದರೆ, ಕೃಷಿ ಚಟುವಟಿಕೆ ಆರಂಭಿಸಲು ಜಲಾಶಯದ ವ್ಯಾಪ್ತಿಯ ರೈತರಲ್ಲಿ ವಿಶ್ವಾಸದ ಕೊರತೆ ಕಾಡುತ್ತಿದೆ. ನೀರಾವರಿ ಸಲಹಾ ಸಮಿತಿಯ ತೀರ್ಮಾನಕ್ಕೆ ಎದುರು ನೋಡುವಂತಾಗಿದೆ.

ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಮತ್ತು ಆಂಧ್ರ ಪ್ರದೇಶ, ತೆಲಂಗಾಣದ ಕೆಲ ಜಿಲ್ಲೆಗಳು ಒಳಪಡುತ್ತವೆ. ಒಟ್ಟು 16 ಲಕ್ಷ ಎಕರೆಗೆ ಪೂರೈಕೆಯಾಗುತ್ತದೆ.

ಭತ್ತ, ಮೆಣಸಿನಕಾಯಿ ಈ ಭಾಗದ ನೀರಾವರಿ ಪ್ರದೇಶದ ಪ್ರಮುಖ ಬೆಳೆಗಳು. ಸದ್ಯ ಜಲಾಶಯದಲ್ಲಿ 29 ಟಿಎಂಸಿ ಅಡಿ ನೀರು ಇದೆ. ನಿತ್ಯ 14,621 ಕ್ಯೂಸೆಕ್ ಒಳಹರಿವು ಇದೆ. ಹತ್ತು ದಿನಗಳಲ್ಲಿ ನೀರಿನ ಮಟ್ಟ 43 ಟಿಎಂಸಿ ಅಡಿಗೆ ಏರಬಹುದು.

ADVERTISEMENT

ಆದರೆ, ಜಲಾಶಯದ 19ನೇ ಕ್ರಸ್ಟ್ ಗೇಟ್‌ನ ದುರಸ್ತಿ ಕಾರ್ಯ ಬಾಕಿ ಇದೆ. ಇನ್ನಿತರ ಗೇಟ್‌ಗಳು ದುರ್ಬಲವಾಗಿದ್ದು, ಬದಲಾಯಿಸಬೇಕಿದೆ. ಹೀಗಾಗಿ ಈ ಬಾರಿ 105.78 ಟಿಎಂಸಿ ಅಡಿ ಸಾಮರ್ಥ್ಯದ  ಜಲಾಶಯದಲ್ಲಿ 80 ಟಿಎಂಸಿ ಅಡಿ ನೀರನ್ನು ಮಾತ್ರ ಸಂಗ್ರಹಿಸಲು ನಿರ್ಧರಿಸಲಾಗಿದೆ. ಮುಖ್ಯವಾಗಿ, ಒಂದು ಬೆಳೆಗೆ ಮಾತ್ರವೇ ನೀರು ಲಭ್ಯವಾಗಲಿದೆ. ಇದು ರೈತರನ್ನು ಆತಂಕಕ್ಕೀಡು ಮಾಡಿದೆ.

‘ಜಲಾಶಯದಿಂದ ಕೂಡಲೇ ಕಾಲುವೆಗಳಿಗೆ ನೀರು ಹರಿಸಿ ಕೃಷಿ ಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕು. ಭವಿಷ್ಯದಲ್ಲಿ ಮತ್ತಷ್ಟು ನೀರು ಸಂಗ್ರಹಿಸಿ ಎರಡನೇ ಬೆಳೆಗೆ ನೀರು ಹೊಂದಿಸುವ ಆಶಾದಾಯಕ ಯೋಜನೆ ಬೇಕು. ನೀರು ಹರಿಸಿ, ಸಂಗ್ರಹಿಸುವ ಸೂತ್ರ ಅನುಸರಿಸಬೇಕು’ ಎಂದು ರೈತರು, ನೀರಾವರಿ ತಜ್ಞರು ಒತ್ತಾಯಿಸಿದ್ದಾರೆ. 

‘ಸದ್ಯಕ್ಕೆ ಜಲಾಶಯದಲ್ಲಿ 1,605 ಅಡಿ ನೀರು ಸಂಗ್ರಹವಿದೆ. ಹೀಗಾಗಿ 1,560 ಅಡಿಯಲ್ಲಿ ಬರುವ ಎಡದಂಡೆ ಕಾಲುವೆ, 1,550 ಅಡಿಯಲ್ಲಿ ಬರುವ ಬಲದಂಡೆ ಕೆಳಹಂತದ ಕಾಲುವೆಗೆ ನೀರು ಹರಿಸಲು ಅಡ್ಡಿ ಇಲ್ಲ. ಈ ಎರಡೂ ಕಾಲುವೆಗಳೇ ಒಟ್ಟಾರೆ 14 ಲಕ್ಷ ಎಕರೆಗೆ ನೀರು ಒದಗಿಸುತ್ತವೆ’ ಎಂದು ತಜ್ಞರು ಹೇಳುತ್ತಾರೆ. 

ಜಲಾಶಯ ನಿರ್ಮಾಣ ಆದಾಗಿನಿಂದ ಈವರೆಗೆ 9 ಬಾರಿ ಹೊರತುಪಡಿಸಿದರೆ, ಇನ್ನುಳಿದ ಎಲ್ಲಾ ವರ್ಷಗಳಲ್ಲೂ ಜಲಾಶಯ ತುಂಬಿದೆ. ಬೆಳೆ ಬೆಳೆಯಲು ಯಾವ ವರ್ಷವೂ ತೊಂದರೆಯಾಗಿಲ್ಲ. ಡಿಸೆಂಬರ್‌ ವೇಳೆಗೆ 90 ಟಿಎಂಸಿ ಅಡಿ ಸಂಗ್ರಹವಿದ್ದರೆ, ಎರಡನೇ ಬೆಳೆಗೂ ಧಾರಾಳವಾಗಿ ನೀರು ಹರಿಸಲಾಗಿದೆ. ಈ ಬಾರಿ ಮಳೆ ಆಶಾದಾಯಕವಾಗಿದೆ. ಪಶ್ಚಿಮ ಘಟ್ಟಗಳಲ್ಲೂ ಮಳೆ ಜೋರಾಗಿ ಬೀಳುತ್ತಿದೆ. ಭದ್ರಾದಿಂದಲೂ ಭಾರಿ ನೀರು ಬಿಡಲಾಗುತ್ತಿದೆ. ಹೀಗಾಗಿ ನದಿಯಲ್ಲಿ ಒಟ್ಟಾರೆ ನೀರಿನ ಲಭ್ಯತೆ ಹೆಚ್ಚಿದೆ.

ಮಾಧವ ರೆಡ್ಡಿ
ಒಟ್ಟು 16 ಲಕ್ಷ ಎಕರೆಗೆ ಪೂರೈಕೆ ಜಲಾಶಯದಲ್ಲಿ 29 ಟಿಎಂಸಿ ಅಡಿ ನೀರು ನಿತ್ಯ 14,621 ಕ್ಯೂಸೆಕ್ ಒಳಹರಿವು ಇದೆ
ಜುಲೈ ಮೊದಲ ವಾರದಿಂದ ಕಾಲುವೆಗಳಿಗೆ ನೀರು ಹರಿಸುವುದು ಒಳ್ಳೆಯದು. ಜಲಾಶಯದಿಂದ ನೀರು ಹರಿಸಿದರೂ ಮತ್ತೆ ಮರುಪೂರಣಗೊಳ್ಳುತ್ತದೆ. 
ಗೋವಿಂದಲು ನಿವೃತ್ತ ಸೂಪರಿಂಡೆಂಟ್‌ ಎಂಜಿನಿಯರ್‌ ತುಂಗಭದ್ರಾ ಜಲಾಶಯ
ಜಲಾಶಯದಿಂದ ಸಾಧ್ಯವಾದಷ್ಟು ಬೇಗ ಕಾಲುವೆಗಳಿಗೆ ನೀರು ಹರಿಸಬೇಕು. ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಗಮನಿಸಬೇಕು 
ಮಾಧವ ರೆಡ್ಡಿ ಅಧ್ಯಕ್ಷ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಂಘಟನೆ

‘ಸಮಿತಿ ನಿರ್ಧಾರ ಕೂಡಲೇ ಪ್ರಕಟಿಸಲಿ’

‘ಏಕಾಏಕಿ ನೀರು ಹರಿಸಿದರೂ ಉಪಯೋಗವಾಗುವುದಿಲ್ಲ. ರೈತರು ಜಮೀನುಗಳನ್ನು ಹದ ಮಾಡಿ ಬೀಜ ಮತ್ತು ರಸಗೊಬ್ಬರ ಹೊಂದಿಸಿಕೊಳ್ಳಲು 15 ದಿನ ಬೇಕು. ಹೀಗಾಗಿ ನೀರಾವರಿ ಸಲಹಾ ಸಮಿತಿ ಕೂಡಲೇ ನಿರ್ಧಾರ ಪ್ರಕಟಿಸಿದರೆ ರೈತರು ಜಮೀನು ಹದ ಮಾಡುವರು. ಒಂದು ವೇಳೆ ನಿರ್ಧಾರ ಪ್ರಕಟಣೆ ವಿಳಂಬವಾದರೆ ಬಿತ್ತನೆ ವಿಳಂಬವಾಗುತ್ತದೆ. ನೀರು ಸಂಗ್ರಹಣೆಗೆ ಅಷ್ಟೇ ಆದ್ಯತೆ ಕೊಟ್ಟರಾಗದು. ನೀರು ಹೊರ ಕಳುಹಿಸಬೇಕು ಬಂದ ನೀರನ್ನು ಶೇಖರಿಸಿಕೊಳ್ಳಬೇಕು. ಆಗ ಮಾತ್ರವೇ ಎರಡನೇ ಬೆಳೆಗೆ ಯೋಜನೆ ರೂಪಿಸಲು ಸಾಧ್ಯ’ ಎಂದು ತಜ್ಞರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.