ADVERTISEMENT

ಸ್ವಾವಲಂಬಿ ಬದುಕಿಗೆ ಸುವಾಸನೆ ತಂದ ಅಗರಬತ್ತಿ

ಮಾಗಳದಲ್ಲಿ ಪರಿಮಳಯುಕ್ತ ಊದುಬತ್ತಿ ತಯಾರಿಕೆ

ಕೆ.ಸೋಮಶೇಖರ
Published 17 ಜುಲೈ 2019, 20:06 IST
Last Updated 17 ಜುಲೈ 2019, 20:06 IST
ಮಾಗಳ ಗ್ರಾಮದ ‘ಶಿವಾನಿ’ ಇಂಡಸ್ಟ್ರೀಸ್ ನಲ್ಲಿ ಯಂತ್ರದ ಮೂಲಕ ಅಗರಬತ್ತಿ ತಯಾರಿಸುತ್ತಿರುವುದು
ಮಾಗಳ ಗ್ರಾಮದ ‘ಶಿವಾನಿ’ ಇಂಡಸ್ಟ್ರೀಸ್ ನಲ್ಲಿ ಯಂತ್ರದ ಮೂಲಕ ಅಗರಬತ್ತಿ ತಯಾರಿಸುತ್ತಿರುವುದು   

ಹೂವಿನಹಡಗಲಿ: ತಾಲ್ಲೂಕಿನ ಮಾಗಳ ಗ್ರಾಮದ ಬಸ್ ನಿಲ್ದಾಣದಿಂದ ಹೊಸಹಳ್ಳಿ ರಸ್ತೆಯಲ್ಲಿ ಕೊಂಚ ಸಾಗಿದರೆ ಘಮ ಘಮ ಸುವಾಸನೆ ಮೂಗಿಗೆ ರಾಚುತ್ತದೆ. ಈ ಪರಿಮಳ ಬರೀ ಗ್ರಾಮಕ್ಕೆ ಸೀಮಿತವಾಗಿರದೇ ದೆಹಲಿವರೆಗೂ ಪಸರಿಸಿರುವುದು ವಿಶೇಷ.

ಎಂ.ನಾರಾಯಣ ರೆಡ್ಡಿ ಮತ್ತು ಎಂ. ಲಕ್ಷ್ಮಿ ದಂಪತಿ ಕಳೆದ ನಾಲ್ಕು ವರ್ಷಗಳಿಂದ ಮಾಗಳ ಗ್ರಾಮದಲ್ಲಿ ‘ಶಿವಾನಿ ಇಂಡಸ್ಟ್ರೀಸ್’ ಮೂಲಕ ಅಗರಬತ್ತಿ ತಯಾರಿಕೆ ಘಟಕ ಆರಂಭಿಸಿದ್ದಾರೆ. ಕಾರ್ಮಿಕರಲ್ಲಿ ಕಾರ್ಮಿಕರಾಗಿ ದುಡಿಯುವ ದಂಪತಿಗೆ ಈ ಗೃಹ ಉದ್ಯಮ ಯಶಸ್ಸು ತಂದುಕೊಟ್ಟಿದೆ.

ಸಾಮಾನ್ಯ ಅಗರಬತ್ತಿ ತಯಾರಿಕೆ ಜತೆಯಲ್ಲಿ ಆಹ್ಲಾದಕರ ಸುವಾಸನೆ ಬೀರುವ ಶ್ರೀಗಂಧ, ಕ್ಯಾದಿಗೆ, ಗುಲಾಬಿ, ಲ್ಯಾವೆಂಡರ್ ಪರಿಮಳದ ಊದುಬತ್ತಿಗಳನ್ನು ತಯಾರಿಸುತ್ತಾರೆ. ಗುಣಮಟ್ಟದಿಂದ ಕೂಡಿರುವ ಇವರ ಉತ್ಪಾದನೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.

ADVERTISEMENT

ಸ್ವಯಂ ಉದ್ಯೋಗ ಆರಂಭಿಸುವ ಯೋಚನೆಯಲ್ಲಿದ್ದ ಲಕ್ಷ್ಮಿ ಅವರು ಟಿ.ವಿ.ಯಲ್ಲಿ ಬಿತ್ತರಗೊಳ್ಳುತ್ತಿದ್ದ ಅಗರಬತ್ತಿ ತಯಾರಿಕೆಯ ಜಾಹೀರಾತಿನಿಂದ ಪ್ರೇರಣೆಗೊಂಡು ಆ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ಅವರಿಂದ ಪೂರಕ ಮಾಹಿತಿ, ತರಬೇತಿಯನ್ನೂ ಪಡೆದು ತಮ್ಮೂರಲ್ಲಿ ಘಟಕ ತೆರೆದಿದ್ದಾರೆ. ಆರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇವರಿಗೆ ನೆರವು ನೀಡಿ ಪ್ರೋತ್ಸಾಹಿಸಿದೆ.

₹5 ಲಕ್ಷ ಬಂಡವಾಳ ಹೂಡಿ, ಅಗರಬತ್ತಿ ತಯಾರಿಸುವ ಎರಡು ಯಂತ್ರಗಳನ್ನು ಅಳವಡಿಸಿದ್ದಾರೆ. ಪ್ರತಿದಿನ 80 ರಿಂದ 100 ಕೆ.ಜಿ. ಊದುಬತ್ತಿ ತಯಾರಾಗುತ್ತಿವೆ. ಘಟಕದಲ್ಲಿ ಇಬ್ಬರು ಮಹಿಳೆಯರು, ಮೂವರು ಯುವಕರಿಗೆ ನಿರಂತರ ಕೆಲಸ ಸಿಕ್ಕಿದೆ. ಸದ್ಯ ಅಗರಬತ್ತಿ ಘಟಕವನ್ನು ಕಾರ್ಮಿಕರ ಸಹಾಯದಿಂದ ಲಕ್ಷ್ಮಿ ನಿರ್ವಹಿಸುತ್ತಿದ್ದರೆ, ಕಚ್ಚಾ ಸಾಮಗ್ರಿಗಳ ಪೂರೈಕೆ ಹಾಗೂ ಮಾರುಕಟ್ಟೆ ಉಸ್ತುವಾರಿಯನ್ನು ಕೇಬಲ್ ಆಪರೇಟರ್ ಆಗಿರುವ ನಾರಾಯಣ ರೆಡ್ಡಿ ನೋಡಿಕೊಳ್ಳುತ್ತಾರೆ.

ಘಟಕಕ್ಕೆ ಕಚ್ಚಾ ಸಾಮಗ್ರಿಗಳಾದ ಇದ್ದಿಲು ಮಿಶ್ರಿತ ಮರದ ಹೊಟ್ಟು, ಚಾರ್ಕೋಲ, ಜಿಗುಟು, ಕಡ್ಡಿ ಮತ್ತು ವಿವಿಧ ಸುಗಂಧ ದ್ರವ್ಯಗಳನ್ನು ಬೆಂಗಳೂರಿನಿಂದ ಖರೀದಿಸುತ್ತಾರೆ. ಇಲ್ಲಿ ತಯಾರಾಗುವ ಅಗರಬತ್ತಿಗೆ ಗುಣಮಟ್ಟ ಆಧರಿಸಿ ಪ್ರತಿ ಕೆ.ಜಿ. ಗೆ ರೂ. ₹70 ರಿಂದ ₹200 ರೂ.ವರೆಗೆ ದರ ನಿಗದಿಪಡಿಸಿದ್ದಾರೆ. ಹೂವಿನಹಡಗಲಿ, ಹರಪನಹಳ್ಳಿ, ಮುಂಡರಗಿ, ಸಂಡೂರಿನ ಅಂಗಡಿಗಳಿಗೆ ಹೋಲ್ ಸೇಲ್ ಮಾರಾಟ ಮಾಡುತ್ತಾರೆ. ಕೆಲ ಮಾರಾಟ ಏಜೆಂಟರು ಘಟಕಕ್ಕೆ ಬಂದು ಅಗರಬತ್ತಿ ಕೊಂಡೊಯ್ಯುತ್ತಾರೆ.

ಕಳೆದ ವರ್ಷ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣ ವಿಕಾಸ ಸಚಿವಾಲಯ ಆಯೋಜಿಸಿದ್ದ ‘ಆಜೀವಿಕಾ ಮೇಳ-2018’ ಕ್ಕೆ ಜಿಲ್ಲಾಡಳಿತ ಇವರನ್ನು ಕಳಿಸಿಕೊಟ್ಟಿತ್ತು. ಅಲ್ಲಿ ಪ್ರದರ್ಶನಗೊಂಡ ವಿಶೇಷ ಪರಿಮಳದ ಇವರ ಗಂಧದ ಕಡ್ಡಿಯ ಉತ್ಪಾದನೆ ಮೆಚ್ಚುಗೆ ಗಳಿಸುವ ಜತೆಗೆ ಅಲ್ಲಿಗೆ ಕೊಂಡೊಯ್ದಿದ್ದ ಎಲ್ಲ ದಾಸ್ತಾನು ಮಾರಾಟವಾಗಿತ್ತು. ಗ್ರಾಮೀಣ ವಿಕಾಸ ಸಚಿವಾಲಯ ಇವರಿಗೆ ಪ್ರಮಾಣಪತ್ರ ನೀಡಿ ಗೌರವಿಸಿದೆ.

‘ಪ್ರಾರಂಭದಲ್ಲಿ ಅನೇಕ ಸವಾಲುಗಳು ಎದುರಿಸಬೇಕಾಯಿತು. ಗೃಹ ಉದ್ಯಮದಲ್ಲಿ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ಸ್ವಾವಲಂಬಿ ಬದುಕಿಗೆ ನೆರವಾಗಿರುವ ಘಟಕವನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಬರುವ ದಿನಗಳಲ್ಲಿ ವಿಶೇಷ ಪರಿಮಳದ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡು ನಮ್ಮದೇ ಆದ ಅಗರಬತ್ತಿ ಬ್ರಾಂಡ್ ರೂಪಿಸುವ ಯೋಜನೆ ಇದೆ’ ಎಂದು ಲಕ್ಷ್ಮಿ ನಾರಾಯಣರೆಡ್ಡಿ ಹೇಳಿದರು.

ಈ ಹಿಂದೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನರೇಗಾ ಸಂಯೋಜಕರಾಗಿ ಹೊರಗುತ್ತಿಗೆ ನೌಕರರಾಗಿದ್ದ ನಾರಾಯಣ ರೆಡ್ಡಿ ಈಗ ಸ್ವಂತ ಉದ್ಯಮ ಆರಂಭಿಸಿ, ನಾಲ್ಕಾರು ಜನರಿಗೆ ಉದ್ಯೋಗದಾತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.