ಬಳ್ಳಾರಿ: ಖಾಸಗಿ ಏಜೆನ್ಸಿಗಳ ಶೋಷಣೆಯಿಂದ ಗುತ್ತಿಗೆ ನೌಕರರನ್ನು ಪಾರು ಮಾಡುವ ಉದ್ದೇಶವುಳ್ಳ ‘ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ’ಗಳಿಗೆ ಏಜೆನ್ಸಿಗಳ ಲಾಬಿಯೇ ಅಡ್ಡಿಯಾಗಿದ್ದು, ಬೀದರ್ ಹೊರತುಪಡಿಸಿದರೆ ಯಾವ ಜಿಲ್ಲೆಗಳಲ್ಲೂ ಈ ವರೆಗೆ ಸಂಘಗಳು ಕಾರ್ಯಾರಂಭ ಮಾಡಿಲ್ಲ.
ಬೀದರ್‌ನಲ್ಲಿ 2008ರಲ್ಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ‘ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ’ ಸ್ಥಾಪನೆಯಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಂಘ ಆರಂಭಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೂ ಹೇಳಿದ್ದಾರೆ.
ಸಂಘ ಸ್ಥಾಪನೆಗೂ ಮೊದಲು, ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ಬಳಿಕ, ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯಿಂದ (ಟೆಂಡರ್ ಪ್ರಕ್ರಿಯೆಗಳಿಂದ) ವಿನಾಯಿತಿ ಪಡೆಯಲು ಕಾಯ್ದೆಯ ಸೆಕ್ಷನ್ 4 (ಜಿ) ಅಡಿಯಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಬಳ್ಳಾರಿ, ಮೈಸೂರು, ಧಾರವಾಡ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳು ಸಂಘ ನೋಂದಾಯಿಸಿವೆ. 4(ಜಿ) ವಿನಾಯಿತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿವೆ. ಆದರೆ, ವಿನಾಯಿತಿ ಇನ್ನೂ ಸಿಕ್ಕಿಲ್ಲ. ಇದಕ್ಕೆ ಖಾಸಗಿ ಏಜೆನ್ಸಿಗಳ ಒತ್ತಡವೇ ಕಾರಣ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.
ಸಂಘಗಳಿಗೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಸಾವಿರಾರು ಕಾರ್ಮಿಕರು ನೋಂದಣಿಯಾಗಿದ್ದಾರೆ. ಬಳ್ಳಾರಿಯಲ್ಲೇ 3,300ಕ್ಕೂ ಅಧಿಕ ಗುತ್ತಿಗೆ ನೌಕರರು ತಲಾ ₹1 ಸಾವಿರ ಠೇವಣಿ ನೀಡಿ ನೋಂದಾಯಿಸಿಕೊಂಡಿದ್ದಾರೆ. ಒಂದು ಬಾರಿ ಸಂಘ ಕಾರ್ಯಾರಂಭ ಮಾಡಿದರೆ, ಇವರೆಲ್ಲ ಏಜೆನ್ಸಿಯ ಕಪಿಮುಷ್ಠಿಯಿಂದ ಮುಕ್ತಿ ಪಡೆಯಲಿದ್ದಾರೆ.
ಇನ್ನೊಂದೆಡೆ, ಸಹಕಾರಿ ಇಲಾಖೆಯಲ್ಲಿ ನೋಂದಣಿಯಾದ ಸಂಘಗಳು ಬಹುಕಾಲ ನಿಷ್ಕ್ರಿಯವಾಗಿ ಉಳಿಯಲು ಅವಕಾಶವಿಲ್ಲ. ಕೂಡಲೇ ಕಾರ್ಯರಂಭ ಮಾಡಬೇಕಾದ ಅನಿವಾರ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.