ADVERTISEMENT

ಬಳ್ಳಾರಿ: 5 ದಿನದ ಸಂಪೂರ್ಣ ಲಾಕ್‌ಡೌನ್ ತಂದ ಆತಂಕ: ಬೆಳಿಗ್ಗೆ 8ಕ್ಕೇ ತರಕಾರಿ ಖಾಲಿ

​ಪ್ರಜಾವಾಣಿ ವಾರ್ತೆ
Published 19 ಮೇ 2021, 3:32 IST
Last Updated 19 ಮೇ 2021, 3:32 IST
ಬಳ್ಳಾರಿಯಲ್ಲಿ ತರಕಾರಿ ಖರೀದಿಗೆ ಮುಗಿಬಿದ್ದ ಜನ
ಬಳ್ಳಾರಿಯಲ್ಲಿ ತರಕಾರಿ ಖರೀದಿಗೆ ಮುಗಿಬಿದ್ದ ಜನ   

ಬಳ್ಳಾರಿ: ಜಿಲ್ಲೆಯಾದ್ಯಂತ ಐದು ದಿನದ ಸಂಪೂರ್ಣ ಲಾಕ್‌ಡೌನ್ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಜಾರಿಯಾಗಲಿರುವುದರಿಂದ, ಮುಂಜಾನೆಯಿಂದಲೇ ನಗರದ ತಾತ್ಕಾಲಿಕ ಮಾರುಕಟ್ಟೆಗಳಲ್ಲಿ ಜನಜಂಗುಳಿ ಏರ್ಪಟ್ಟಿತ್ತು.

ಬೆಳಿಗ್ಗೆ 8 ಗಂಟೆಯ ವೇಳೆಗೆ ಬಹಳಷ್ಟು ತರಕಾರಿ, ಸೊಪ್ಪುಗಳು ಸಂಪೂರ್ಣ ಖಾಲಿಯಾಗಿದ್ದವು. ಅಳಿದುಳಿದ ತರಕಾರಿ ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದರು.‌ಎಲ್ಲಿಯೂ ಜನ ಪರಸ್ಪರ ಅಂತರ ಕಾಯ್ದುಕೊಳ್ಳದೇ ಗುಂಪುಗೂಡಿದ್ದರು.

ಹಾಲಿನ ಬೂತ್ ಗಳಲ್ಲೂ ಇದೇ ದೃಶ್ಯಗಳು ಕಂಡು ಬಂದವು.

ADVERTISEMENT

ನಗರದ ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ ಜನಜಂಗುಳಿ,‌ ವಾಹನ‌ ದಟ್ಟಣೆ ಎಂದಿಗಿಂತಲೂ ಹೆಚ್ಚಿತ್ತು. ಕೆಲವೆಡೆ ವಾಹನ ಸಂಚಾರ ವ್ಯಸ್ತಗೊಂಡಿತ್ತು.

'ಬೆಳಿಗ್ಗೆ 8 ಗಂಟೆಗೆ ಮಾರುಕಟ್ಟೆಯಲ್ಲಿ ಬೀನ್ಸ್, ಈರುಳ್ಳಿ. ಸೊಪ್ಪುಗಳು ಖಾಲಿಯಾಗಿದ್ದವು. ಹಣ್ಣುಗಳೂ ಕೂಡ ಇರಲಿಲ್ಲ. ಇನ್ನು ಎಷ್ಟು ಮುಂಚಿತವಾಗಿ ಬರಬೇಕಿತ್ತು ಎಂಬುದೇ ಗೊತ್ತಾಗುತ್ತಿಲ್ಲ. ದಿಢೀರನೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದರ ಪರಿಣಾಮ ಇದು' ಎಂದು ಗೃಹಿಣಿ ಪುಷ್ಪಲತಾ ಅಸಮಾಧಾನ ವ್ಯಕ್ತಪಡಿಸಿದರು.

'ಪರಸ್ಪರ‌ ಅಂತರ ಕಾಯ್ದುಕೊಂಡು ತರಕಾರಿ ಖರೀದಿಸಬೇಕೆಂಬ ಕನಿಷ್ಠ ಅರಿವನ್ನೂ ಇಲ್ಲದ ಸನ್ನಿವೇಶವನ್ನು‌ಲಾಕ್ ಡೌನ್ ಸೃಷ್ಟಿಸಿದೆ. ಇನ್ನು ಕೊರೊನಾ ಸೋಂಕು ಹೇಗೆ ನಿಯಂತ್ರಣಕ್ಕೆ ಬರುತ್ತದೆ' ಎಂದು ಕೌಲ್ ಬಜಾರ್ ನಿವಾಸಿ ಮಹ್ಮದ್ ಇಮ್ತಿಯಾಜ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.