ಕುರುಗೋಡು: ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಬಿ.ಆರ್. ಅಂಬೇಡ್ಕರ್ ಸಂಘದ ವತಿಯಿಂದ ಆಚರಿಸಿದ ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಜಯಂತಿ ಅಂಗವಾಗಿ ಚಿತ್ರ ಮೆರವಣಿಗೆ ಸೋಮವಾರ ಜರುಗಿತು.
ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದಿಂದ ಪ್ರಾರಂಭಗೊ0ಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಮಾವೇಶಗೊಂಡಿತು.
ಮಹಿಳೆಯರಿಂದ ಕಳಸ, ಪೂರ್ಣಕುಂಭ, ತಾಸಿರಾಮ್, ರಾಮಡೋಲ್, ಹಗಲು ವೇಶ ಕಲಾವಿದರ ತಂಡ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದ್ದವು.
ವಿವಿಧ ಸಂಘಟನೆಗಳ ಮುಖಂಡರು, ತಹಶೀಲ್ದಾರ್ ಕಚೇರಿ ಮತ್ತು ಪುರಸಭೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್ ಮಾತನಾಡಿ, ‘ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಬಿ.ಆರ್.ಅಂಬೇಡ್ಕರ್ ಅವರನ್ನು ಜಾತಿಬೇಧವಿಲ್ಲದೆ ಎಲ್ಲರೂ ಅಪ್ಪಿಕೊಳ್ಳಬೇಕು ಮತ್ತು ಅವರ ವಿಚಾರಧಾರೆಗಳನ್ನು ಒಪ್ಪಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ ಮಾತನಾಡಿ, ‘ಬಿ.ಆರ್.ಅಂಬೇಡ್ಕರ್ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಿದರೆ ಪ್ರಯೋಜನವಿಲ್ಲ. ಅವರ ವಿಚಾರಧಾರೆಗಳನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡಬೇಕು’ ಎಂದರು.
ಉಪನ್ಯಾಸಕ ಹುಲುಗಪ್ಪ ಬಿ.ಆರ್.ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು.
ಪುರಸಭೆ ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ, ಪ್ರಾಚಾರ್ಯ ಎಚ್. ರಾಮಕೃಷ್ಣ, ಪುರಸಭೆ ಮುಖ್ಯಾಧಿಕಾರಿ ಹರ್ಷವರ್ಧನ ರೆಡ್ಡಿ, ಉಪನೋಂದಣಾಧಿಕಾರಿ ಕಿರಣ್, ಬಿ.ಆರ್.ಅಂಬೇಡ್ಕರ್ ಸಂಘದ ತಾಲ್ಲೂಕು ಅಧ್ಯಕ್ಷ ಟಿ. ಸಿದ್ದಪ್ಪ, ಗೌರವಾಧ್ಯಕ್ಷ ಎಂ.ರುದ್ರಪ್ಪ, ಬಾಬು ಜಗಜೀನವ್ ರಾಂ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.