ADVERTISEMENT

ಮುದ್ಲಾಪುರಕ್ಕೆ ಆನಂದ್‌ ಸಿಂಗ್‌ ಭೇಟಿ

ಗ್ರಾಮಸ್ಥರಿಗೆ ನಿವೇಶನ ಹಕ್ಕು ಪತ್ರ ಕೊಡುವ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 13:51 IST
Last Updated 10 ಡಿಸೆಂಬರ್ 2019, 13:51 IST
ಶಾಸಕ ಆನಂದ್‌ ಸಿಂಗ್‌ ಅವರು ಮಂಗಳವಾರ 88 ಮುದ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು
ಶಾಸಕ ಆನಂದ್‌ ಸಿಂಗ್‌ ಅವರು ಮಂಗಳವಾರ 88 ಮುದ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು   

ಹೊಸಪೇಟೆ: ಶಾಸಕರಾಗಿ ಆಯ್ಕೆಗೊಂಡ ಮಾರನೇ ದಿನ ಮಂಗಳವಾರ ಶಾಸಕ ಆನಂದ್‌ ಸಿಂಗ್‌ ಅವರು ತಾಲ್ಲೂಕಿನ 88 ಮುದ್ಲಾಪುರ ಗ್ರಾಮಕ್ಕೆ ಭೇಟಿ ನೀಡಿದರು.

ಗ್ರಾಮಕ್ಕೆ ಆನಂದ್‌ ಸಿಂಗ್ ಬರುತ್ತಿದ್ದಂತೆಯೇ ಸ್ಥಳೀಯರು ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಿದರು. ಬಳಿಕ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅವರು, ‘ಈ ಹಿಂದೆ ನಾನು ನೀಡಿರುವ ಭರವಸೆಯಂತೆ ಗ್ರಾಮದಲ್ಲಿರುವ ಎಲ್ಲರಿಗೂ ನಿವೇಶನದ ಪಟ್ಟಾ ಕೊಡಿಸಲಾಗುವುದು. ಈಗಷ್ಟೇ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನಗೆ ಒಂದು ತಿಂಗಳ ಕಾಲಾವಕಾಶ ಕೊಡಿ. ಅಷ್ಟರಲ್ಲಿ ನಾನು ಕೆಲಸ ಮಾಡಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಅದರಿಂದ ಸಂತಸಗೊಂಡ ಗ್ರಾಮಸ್ಥರು ಚಪ್ಪಾಳೆ ತಟ್ಟಿ, ಅಭಿನಂದನೆ ತಿಳಿಸಿದರು. ‘ಸಮೀಪದಲ್ಲಿಯೇ ರೈಲು ನಿಲ್ದಾಣ ಇದೆ. ಅಲ್ಲದೇ ಗ್ರಾಮಸ್ಥರು ಇರುವ ಜಾಗ ಖಾಸಗಿಯವರಿಗೆ ಸೇರಿದೆ. ಆ ಮಾಲೀಕನ ಜತೆ ಮಾತನಾಡಿ ನಾನು ಸಮಸ್ಯೆ ಬಗೆಹರಿಸುತ್ತೇನೆ. ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ’ ಎಂದು ಭರವಸೆ ತುಂಬಿದರು.

ADVERTISEMENT

‘ಗ್ರಾಮದಲ್ಲಿ ಕೆಲವು ಸಮಸ್ಯೆಗಳಿರುವುದು ಗಮನಕ್ಕೆ ತಂದಿದ್ದೀರಿ. ಇಡೀ ಹಳ್ಳಿಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪಟ್ಟಾ ನೀಡುವುದು, ಮೂಲಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಡಿ. 5ರಂದು ಮತದಾನ ಬಹಿಷ್ಕರಿಸಿದ್ದರು. ಆನಂದ್‌ ಸಿಂಗ್‌ ಅವರು ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರೂ ಗ್ರಾಮಸ್ಥರು ವರ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ.

ಸಹಾಯಕ ಚುನಾವಣಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ಅವರು ಬಂದು, ಗ್ರಾಮಸ್ಥರಿಗೆ ಸಮಸ್ಯೆ ಬಗೆಹರಿಸುವ ಖಚಿತ ಭರವಸೆ ನೀಡಿದ್ದ ನಂತರವೇ ಮತದಾನ ಪ್ರಕ್ರಿಯೆ ಆರಂಭಗೊಂಡಿತ್ತು. ಮೂರುವರೆ ತಾಸು ಮತದಾನ ಸ್ಥಗಿತಗೊಂಡಿತ್ತು.

ಗ್ರಾಮದ ಮುಖಂಡರಾದ ವಿ. ಅಂಜಿನಿ, ಗಾದಿಲಿಂಗಪ್ಪ, ಪಂಪಾಪತಿ, ಅಂಜಿನಿ, ಸಣ್ಣ ಅಂಜಿನಿ, ಶೇಕ್ಷಾವಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.