ADVERTISEMENT

ತಿರುಪತಿಗೆ ಶಾಸಕ ಆನಂದ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 11:13 IST
Last Updated 26 ಜುಲೈ 2019, 11:13 IST
   

ಹೊಸಪೇಟೆ: ರಾಜಕೀಯ ಅಸ್ಥಿರತೆ ನಡುವೆ ಶಾಸಕ ಆನಂದ್‌ ಸಿಂಗ್‌ ಶುಕ್ರವಾರ ತಿರುಮಲ ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದುಕೊಂಡರು.

ತಿರುಪತಿಯಿಂದ ತಿರುಮಲ ಬೆಟ್ಟದ ವರೆಗೆ ಸಂಬಂಧಿಕರು ಹಾಗೂ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ, ದೇವರ ದರ್ಶನ ಪಡೆದರು.

ಜಿಂದಾಲ್‌ಗೆ ಭೂ ಪರಭಾರೆ ಮಾಡಬಾರದು, ವಿಜಯನಗರ ಜಿಲ್ಲೆಯೆಂದು ಘೋಷಿಸಬೇಕೆಂಬ ಬೇಡಿಕೆಗಳೊಂದಿಗೆ ಆನಂದ್‌ ಸಿಂಗ್‌ ಜುಲೈ 1ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ನಂತರ 13ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಕೊಟ್ಟಿದ್ದರು. ನಂತರ ಇದು ರಾಜ್ಯದ ಸಮ್ಮಿಶ್ರ ಸರ್ಕಾರದ ಪತನಕ್ಕೂ ಕಾರಣವಾಯಿತು. ಇನ್ನಷ್ಟೇ ಸಿಂಗ್‌ ಅವರ ರಾಜೀನಾಮೆ ಅಂಗೀಕಾರವಾಗಬೇಕಿದೆ.

ADVERTISEMENT

ಗುರುವಾರವಷ್ಟೇ ಸ್ಪೀಕರ್‌ ರಮೇಶ ಕುಮಾರ ಅವರು ಮೂವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಸ್ಪೀಕರ್‌, ಸಿಂಗ್‌ ಅವರ ರಾಜೀನಾಮೆ ಸ್ವೀಕರಿಸುತ್ತಾರೋ ಅಥವಾ ಇನ್ನೇನಾಗುತ್ತೋ ಎಂಬ ಕುತೂಹಲ ಕ್ಷೇತ್ರದ ಜನರಲ್ಲಿ ಮನೆ ಮಾಡಿದೆ.

ರಾಜೀನಾಮೆ ಕೊಟ್ಟಿರುವ ಇತರೆ ಶಾಸಕರು ಅಜ್ಞಾತ ಸ್ಥಳದಲ್ಲಿ ಉಳಿದುಕೊಂಡರೆ, ಸಿಂಗ್‌ ಮಾತ್ರ ರಾಜೀನಾಮೆ ಕೊಟ್ಟ ದಿನದಿಂದ ಕ್ಷೇತ್ರದಲ್ಲಿಯೇ ಇದ್ದಾರೆ. ಸಿಂಗ್‌ ಅವರೊಂದಿಗೆ ಅವರ ಅಳಿಯ ಸಂದೀಪ್‌ ಸಿಂಗ್‌, ಭಾಮೈದ ಧರ್ಮೇಂದ್ರ ಸಿಂಗ್‌ ಸೇರಿದಂತೆ ಅವರ ಬೆಂಬಲಿಗರು ತಿರುಪತಿಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.