ಸಂಡೂರು: ತಾಲ್ಲೂಕಿನ ತೋರಣಗಲ್ಲು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿರುವ 5ನೇ ಅಂಗನವಾಡಿ ಕೇಂದ್ರದ ನೂತನ ಕಟ್ಟಡವು ಕಳಪೆ ಕಾಮಗಾರಿಯ ಆರೋಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ, ಕ್ಷೇತ್ರದ ಜನ ಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಸುಮಾರು ಮೂರು ವರ್ಷಗಳಿಂದ ಉದ್ಘಾಟನೆಯ ಭಾಗ್ಯ ಕಾಣದೇ ಪಾಳು ಬಿದ್ದಿದೆ.
ಗ್ರಾಮದಲ್ಲಿನ ಅಂಗನವಾಡಿ ಕೇಂದ್ರವು ಹಳೆಯ, ಶಿಥಿಲಗೊಂಡ ಕಟ್ಟಡದಲ್ಲಿಯೇ ಹಲವಾರು ವರ್ಷಗಳಿಂದ ನಡೆಯುತ್ತಿತ್ತು. ಮಕ್ಕಳಿಗೆ ಆಪಾಯ ಆಗುವುದನ್ನು ಗಮನಿಸಿದ ಗ್ರಾಮದ ಜನರು ಹಳೆಯ ಕಟ್ಟಡವನ್ನು ಶೀಘ್ರವಾಗಿ ತೆರವುಗೊಳಿಸಿ, ಅದೇ ಸ್ಥಳದಲ್ಲಿ ನೂತನ ಕಟ್ಟಡವನ್ನು ನಿರ್ಮಿಸುವಂತೆ ಒತ್ತಾಯಿಸಿದ ಪರಿಣಾಮ ಶಿಶು ಅಭಿವೃದ್ಧಿ ಇಲಾಖೆಯವರು ನೂತನ ಕಟ್ಟಡ ಕಾಮಗಾರಿಗೆ ಮುಂದಾಗಿದ್ದರು.
ಬಳ್ಳಾರಿ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ರೂರ್ಬನ್ ಯೋಜನೆಡಿಯ ಕೆ.ಆರ್.ಐ.ಡಿ.ಎಲ್ ಅನುದಾನದಲ್ಲಿ ₹18 ಲಕ್ಷ ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಗಿದೆ.
ಕೇಂದ್ರವು ಉದ್ಘಾಟನೆಗೆ ಮುನ್ನ ಕಟ್ಟಡದ ಚಾವಣಿಯ ಮುಂಭಾಗದ ಗೋಡೆಗಳು ಬಿರುಕು ಬಿಟ್ಟಿವೆ. ಮಕ್ಕಳಿಗೆ ಕುಡಿಯುವ ನೀರಿಗಾಗಿ ನೆಲಮಟ್ಟದ ಟ್ಯಾಂಕ್ ನಿರ್ಮಿಸಿಲ್ಲ, ಶೌಚಾಲಯದ ತಗ್ಗು ಗುಂಡಿಗಳ ನಿರ್ಮಾಣ ಮಾಡಿಲ್ಲ. ಕಟ್ಟಡದ ಮುಂಭಾಗದಲ್ಲಿ ಚಿಕ್ಕ ಮಕ್ಕಳ ಸುರಕ್ಷತೆಗಾಗಿ ಕನಿಷ್ಠ ಕಬ್ಬಿಣದ ಗ್ರಿಲ್‌ಗಳನ್ನು ಸಹ ಅಳವಡಿಸಿಲ್ಲ. ಕಟ್ಟಡದ ಒಳಾಂಗಣದಲ್ಲಿ ಟೈಲ್ಸ್‌ಗಳನ್ನು ಸಮಪರ್ಕವಾಗಿ ಅಳವಡಿಸಿಲ್ಲ. ವಿದ್ಯುತ್‌ನ ವೈರ್ ಬೋರ್ಡ್‍ಗಳು ಸುಟ್ಟಿವೆ. ಮಕ್ಕಳ ನೂತನ ಆಟಿಕೆ ಸಾಮಾನುಗಳಿದ್ದರೂ ಕೇಂದ್ರದಲ್ಲಿ ಸ್ಥಳದ ಕೊರತೆಯಿಂದ ವ್ಯರ್ಥವಾಗಿ ಮೂಲೆಗುಂಪಾಗಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೇಂದ್ರವು ಪ್ರಸ್ತುತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿನ ಕಟ್ಟಡದಲ್ಲಿ ಸುಮಾರು ಮೂರು ವರ್ಷಗಳಿಂದ ನಡೆಯುತ್ತಿದ್ದು, ಕೇಂದ್ರದಲ್ಲಿ ಹೆಣ್ಣು– 20, ಗಂಡು- 16 ಮಕ್ಕಳು ಸೇರಿ ಒಟ್ಟು 36 ಮಕ್ಕಳು ದಾಖಲಾಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕೊಠಡಿಗಳ ತೊಂದರೆಯಾಗುತ್ತಿದ್ದು, ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕೇಂದ್ರವನ್ನು ನೂತನ ಕಟ್ಟಡಕ್ಕೆ ತ್ವರಿತವಾಗಿ ಸ್ಥಳಾಂತರಗೊಳಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿನ 5ನೇ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಾಗಿದ್ದು ಜಿಲ್ಲಾಡಳಿತವು ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು– ಎ.ಸ್ವಾಮಿ, ಗ್ರಾಮದ ನಿವಾಸಿ
ನೂತನ ಅಂಗವಾಡಿ ಕೇಂದ್ರದ ಕಟ್ಟಡದ ಸಮಸ್ಯೆಯ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೆ ತರಲಾಗಿದೆ. ಕೇಂದ್ರದಲ್ಲಿ ಇನ್ನು ಅಲ್ಪ ಪ್ರಮಾಣದ ಕೆಲಸಗಳು ಬಾಕಿ ಇವೆ.– ಲಾಲ್‍ಸಾಬ್, ತಾಲ್ಲೂಕು ಯೋಜನಾಧಿಕಾರಿ ಶಿಶು ಅಭಿವೃದ್ಧಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.