
ಸಂಡೂರು: ತಾಲ್ಲೂಕಿನ ಕುರೆಕುಪ್ಪ ಪಟ್ಟಣದ ನಾಲ್ಕನೇ ವಾರ್ಡ್‍ನಲ್ಲಿರುವ ಮೂರನೇ ಅಂಗನವಾಡಿ ಕೇಂದ್ರವು ಶಿಥಿಲಗೊಂಡು ಪಾಳು ಬಿದ್ದಿದ್ದು, ಸದ್ಯ ಕಾರ್ಯಕರ್ತೆಯ ಬಾಡಿಗೆ ಮನೆಯ ಹೊರಾಂಗಣದಲ್ಲೇ ನಡೆಯುತ್ತಿದೆ.
ಪಟ್ಟಣದ ವಾಲ್ಮೀಕಿ ಭವನದ ಬಳಿ ಮೂರನೇ ಅಂಗನವಾಡಿ ಕೇಂದ್ರವನ್ನು 2001ರಲ್ಲಿ ಭೂಸೇನಾ ನಿಗಮದ ವತಿಯಿಂದ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗಿತ್ತು. ಕಟ್ಟಡವು ನಿರ್ಮಾಣವಾಗಿ ಸುಮಾರು 25 ವರ್ಷಗಳಾಗಿದ್ದರಿಂದ ಕಟ್ಟಡವು ಶಿಥಿಲಗೊಂಡು ಕುಸಿಯುವ ಹಂತಕ್ಕೆ ತಲುಪಿದೆ. ಹೀಗಾಗಿ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ.
ಅಂಗನವಾಡಿ ಕೇಂದ್ರವನ್ನು ನಡೆಸಲು ಪಟ್ಟಣದಲ್ಲಿ ಸೂಕ್ತ ಕಟ್ಟಡದ ಕೊರತೆ, ಮನೆಗಳ ಬಾಡಿಗೆ ದರ ಹೆಚ್ಚಿರುವುದರಿಂದ ಕೇಂದ್ರವನ್ನು ಕಾರ್ಯಕರ್ತೆಯ ಬಾಡಿಗೆ ಮನೆಯ ಹೊರಾಂಗಣದ ಇಕ್ಕಟ್ಟಿನ ಸ್ಥಳದಲ್ಲೇ ನಡೆಸಲಾಗುತ್ತಿದೆ. ಮಕ್ಕಳು ಬಿಸಿಲು, ಗಾಳಿ, ಮಳೆಯಲ್ಲೇ ಸೂಕ್ತ ರಕ್ಷಣೆಯಿಲ್ಲದೆ ನಿತ್ಯ ಕಲಿಯುವಂತಾಗಿದೆ.
ಮನೆಯು ಚಿಕ್ಕದಾಗಿದ್ದು, ಪೌಷ್ಠಿಕ ಆಹಾರ, ಅಕ್ಕಿ ಸೇರಿದಂತೆ ಇತರೆ ಆಹಾರ ಸಾಮಾಗ್ರಿಗಳ ಚೀಲಗಳನ್ನು ಸಂಗ್ರಹ ಮಾಡಲಾಗಿದೆ. ಮನೆಯ ಹೊರಾಂಗಣದಲ್ಲಿ ಮಕ್ಕಳ ಆಟಿಕೆ ಸಾಮಾನುಗಳು, ಕಟ್ಟಿಗೆಯ ಆಲ್ಮೇರ, ಸಿಲಿಂಡರ್, ಇತರೆ ಸಾಮಾಗ್ರಿಗಳನ್ನು ಇರಿಸಲಾಗಿದೆ. ಜೊತೆಗೆ ಕಾರ್ಯಕರ್ತೆಯ ಟೇಬಲ್, ಚೇರ್ ಇದ್ದು ಉಳಿದ ಅಲ್ಪ ಸ್ಥಳದಲ್ಲೇ ಮಕ್ಕಳು ಕೂಡಬೇಕಾಗಿದೆ.
ಕೇಂದ್ರದಲ್ಲಿ 13 ಹೆಣ್ಣು ಮಕ್ಕಳು ಸೇರಿ ಒಟ್ಟು 18 ಮಕ್ಕಳಿದ್ದಾರೆ. ಕೇಂದ್ರದ ಸಹಾಯಕಿ ಕಳೆದ ಮಾರ್ಚ್ ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಿದ್ದರಿಂದ ಕೇಂದ್ರದಲ್ಲಿನ ಕಾರ್ಯಕರ್ತೆಯೇ ಮಕ್ಕಳನ್ನು ಪೋಷಣೆ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ, ಕೇಂದ್ರವನ್ನು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸದ, ಸಮಸ್ಯೆ ಕಂಡೂ ಕಾಣದಂತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ, ಪುರಸಭೆಯ ಜನಪ್ರತಿನಿಧಿಗಳ ವಿರುದ್ಧ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಹಳೆ ಅಂಗನವಾಡಿ ಜಾಗದಲ್ಲೇ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಶಿಶು ಅಭಿವೃದ್ಧಿ ಇಲಾಖೆ, ಸ್ಥಳೀಯ ಪುರಸಭೆಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರವು ಸಕಾಲಕ್ಕೆ ಅನುದಾನ ಬಿಡುಗಡೆಗೊಳಿಸಿ ನೂತನ, ಆಧುನಿಕ ಅಂಗನವಾಡಿ ನಿರ್ಮಿಸಬೇಕು ಎಂದು ವಾರ್ಡ್‍ನ ನಿವಾಸಿಗಳು ಒತ್ತಾಯಿಸಿದ್ದಾರೆ.
ಶಿಥಿಲಗೊಂಡ ಅಂಗನವಾಡಿ ಕೇಂದ್ರ ಸಹಾಯಕಿ ಮನೆ ಹೊರಾಂಗಣದ ಇಕ್ಕಟ್ಟಿನ ಜಾಗದಲ್ಲೇ ಕಲಿಕೆ ಕೇಂದ್ರವನ್ನು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಲು ಆಗ್ರಹ
ಹಳೇ ಅಂಗನವಾಡಿ ಕೇಂದ್ರವನ್ನು ತೆರವು ಮಾಡಿ ಅದೇ ಜಾಗದಲ್ಲಿ ಸರ್ಕಾರ ಹೊಸದಾಗಿ ಅಂಗನವಾಡಿ ಕೇಂದ್ರ ನಿರ್ಮಿಸಬೇಕು. ಈ ಮೂಲಕ ಮಕ್ಕಳಿಗೆ ಸುರಕ್ಷತೆ ಕಲಿಕೆಗೆ ಅದ್ಯತೆ ನೀಡಬೇಕುಜಿ.ಪಂಪನಗೌಡ ಸಂಡೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ
ಕುರೆಕುಪ್ಪ ಪಟ್ಟಣದಲ್ಲಿನ ಶಿಥಿಲಗೊಂಡ ಕಟ್ಟಡ ಶೀಘ್ರ ತೆರವುಗೊಳಿಸಲಾಗುವುದು. ಕೆಎಂಇಆರ್‌ಸಿ ಅನುದಾನದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದುನಾಗರಾಜ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಡೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.