ADVERTISEMENT

ಹಗರಿಬೊಮ್ಮನಹಳ್ಳಿ | ಚಿಣ್ಣರಿಗಿಲ್ಲ ಅಂಗನವಾಡಿ ಭಾಗ್ಯ: ಬಯಲಿನಲ್ಲಿಯೇ ಆಟ, ಪಾಠ

ಸಿ.ಶಿವಾನಂದ
Published 19 ಸೆಪ್ಟೆಂಬರ್ 2025, 5:24 IST
Last Updated 19 ಸೆಪ್ಟೆಂಬರ್ 2025, 5:24 IST
ಹಗರಿಬೊಮ್ಮನಹಳ್ಳಿಯಲ್ಲಿ ಇರುವ ಪರಿಶಿಷ್ಟ ಸಮುದಾಯದ ಅಲೆಮಾರಿ ಸಮುದಾಯದ ಸಿಂಧೊಳ್ಳು ಜನಾಂಗದ ಮಕ್ಕಳು
ಹಗರಿಬೊಮ್ಮನಹಳ್ಳಿಯಲ್ಲಿ ಇರುವ ಪರಿಶಿಷ್ಟ ಸಮುದಾಯದ ಅಲೆಮಾರಿ ಸಮುದಾಯದ ಸಿಂಧೊಳ್ಳು ಜನಾಂಗದ ಮಕ್ಕಳು   

ಹಗರಿಬೊಮ್ಮನಹಳ್ಳಿ: ಅಂಗನವಾಡಿಯಲ್ಲಿ ಬಾಲ್ಯದ ದಿನಗಳನ್ನು ಕಳೆಯಬೇಕಿದ್ದ 20ಕ್ಕೂ ಹೆಚ್ಚು ಪರಿಶಿಷ್ಟ ಸಮುದಾಯದ ಅಲೆಮಾರಿ ಸಿಂಧೊಳ್ಳು ಜನಾಂಗದ ಚಿಣ್ಣರಿಗೆ ಅದೃಷ್ಟ ಇರಲಿಲ್ಲ. ಇದುವರೆಗೂ ಅಂಗನವಾಡಿ ಕೇಂದ್ರ ಇಲ್ಲಿ ಸ್ಥಾಪಿಸಿಲ್ಲ. ಸ್ಥಾಪಿಸಲು ಇಲ್ಲಿ ಸ್ಥಳಾವಕಾಶವೂ ಇಲ್ಲ, ಅಲೆಮಾರಿಗಳು ಎನ್ನುವ ಕಾರಣದಿಂದಾಗಿ ಇವರ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ. ಇಲ್ಲಿರುವ ಚೌಡೇಶ್ವರಿ ಟೆಂಟ್ ದೇವಸ್ಥಾನದ ಆವರಣ ಮಕ್ಕಳಿಗೆ ಆಟದ ಮೈದಾನವಾಗಿದೆ.

ಚಿಂತ್ರಪಳ್ಳಿ ರಸ್ತೆಯ ಪಕ್ಕದಲ್ಲಿ ವಾಸಿಸುತ್ತಿರುವ 400ಕ್ಕೂ ಹೆಚ್ಚು ಅಲೆಮಾರಿಗಳಿಗೆ ಸ್ವಂತ ಮನೆಗಳಿಲ್ಲ, ಯಾರದೋ ನಿವೇಶನದಲ್ಲಿ ನಿರ್ಮಿಸಿರುವ ಟೆಂಟ್‍ಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಕಾಯಂ ಸೂರು ಇಲ್ಲ, ವಿಳಾಸವೂ ಇಲ್ಲ. ಈಚೆಗಷ್ಟೆ 1ರಿಂದ 5ನೇ ತರಗತಿಯ 51 ಸಿಂಧೊಳ್ಳು ಜನಾಂಗದ ವಿದ್ಯಾರ್ಥಿಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಶಾಲೆಗೆ ಕರೆತರಲೆಂದು ಪ್ರತಿದಿನ ಇಬ್ಬರು ಶಿಕ್ಷಕರನ್ನು ಬಿಇಒ ಮೈಲೇಶ್ ಬೇವೂರ್ ನಿಯೋಜಿಸಿದ್ದರ ಪರಿಣಾಮ ಈಗ ಶಾಲೆಗೆ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಶಾಲೆಯ ಮುಖ ನೋಡದಿದ್ದ ವಿದ್ಯಾರ್ಥಿಗಳಿಗೆ ಅಕ್ಷರದ ಕಲಿಕೆ ಆರಂಭಿಸಲಾಗಿದೆ.

ಆದರೆ 3ರಿಂದ 6ವರ್ಷಗಳ ಒಳಗಿನ ಮಕ್ಕಳಿಗೆ ಉಚಿತವಾಗಿ ಸಿಗುವ ಶಾಲಾ ಪೂರ್ವ ಶಿಕ್ಷಣ ಕೇಂದ್ರ ಇಲ್ಲಿಲ್ಲ, ಮಕ್ಕಳೆಲ್ಲಾ ಆರಂಭದಲ್ಲಿ ಆಟದ ಮೂಲಕ ಅಕ್ಷರ ಕಲಿಯುವ ಕಲಿಕಾ ಕೇಂದ್ರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಕ್ಷರ ಮಾತ್ರವಲ್ಲ ಮಕ್ಕಳಿಗೆ ಮತ್ತು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೋಷಕಾಂಶವುಳ್ಳ ಆಹಾರ ಪೂರೈಸುವ ಪೋಷಣೆ ಕೇಂದ್ರ ಮತ್ತು ಆರೋಗ್ಯ ಸಲಹೆಗಳನ್ನು ನೀಡುವ ಮಾತೃ ಕೊಠಡಿ ಇದಾಗಿದೆ. ಈ ಸೌಲಭ್ಯ ಪಡೆಯಲು ಬುಡ್ಗ ಜಂಗಮ ಕಾಲೊನಿಯ ಮಕ್ಕಳಿಗೆ ಸ್ಥಾಪಿಸಲಾಗಿರುವ ಅಂಗನವಾಡಿ ಕೇಂದ್ರಕ್ಕೆ ಹೋಗಬೇಕು.

ADVERTISEMENT

‘ಸಿಂಧೊಳ್ಳು ಜನಾಂಗದವರು ವಾಸಿಸುವ ಕಾಲೊನಿಯಿಂದ 500 ಮೀಟರ್ ದೂರದಲ್ಲಿ ಅಂಗನವಾಡಿ ಕೇಂದ್ರವಿದೆ. ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿದಿನವೂ ಅವರಿದ್ದಲ್ಲಿಗೆ ಹೋಗಿ ಕರೆದರೂ ಮಕ್ಕಳನ್ನು ಕಳುಹಿಸುತ್ತಿಲ್ಲ‘ ಎಂದು ಸಿಡಿಪಿಒ ಬೋರೆಗೌಡ ತಿಳಿಸಿದರು.

‘ಕಾಲೊನಿಯ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ ಅವರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಬುಡ್ಗ ಜಂಗಮ ಕಾಲೊನಿಯಲ್ಲಿ ಕೇಂದ್ರವಿದೆ. ಅಲ್ಲಿಗೆ ಮಕ್ಕಳನ್ನು ಕಳಿಸುವುದಕ್ಕೆ ಪಾಲಕರು ಒಪ್ಪುತ್ತಿಲ್ಲ
ಕಲ್ಲೇಶ್ ಸಿಂಧೊಳ್ಳು ಜನಾಂಗದ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.