ADVERTISEMENT

‘ತುರ್ತು ಕೆಲಸದಲ್ಲಿದ್ದವರಿಗೆ ವಿಮೆ ಘೋಷಿಸಿ’: ಬಿಸಾಟಿ ಮಹೇಶ್‌ 

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 12:07 IST
Last Updated 2 ಏಪ್ರಿಲ್ 2020, 12:07 IST

ಹೊಸಪೇಟೆ: ‘ಕೊರೊನಾ ಸೋಂಕು ಹರಡದಂತೆ ತಡೆಯಲು ವೈದ್ಯರು, ಪೊಲೀಸರು, ಪೌರಕಾರ್ಮಿಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸುತ್ತಿದ್ದು, ಅವರಿಗೆ ಸರ್ಕಾರ ವಿಮೆ ಘೋಷಿಸಬೇಕು’ ಎಂದು ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ (ಡಿ.ವೈ.ಎಫ್‌.ಐ.) ರಾಜ್ಯ ಘಟಕದ ಉಪಾಧ್ಯಕ್ಷ ಬಿಸಾಟಿ ಮಹೇಶ್‌ ಆಗ್ರಹಿಸಿದ್ದಾರೆ.

‘ಈ ತುರ್ತು ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವವರ ಆಸರೆಗೆ ಬರುವುದು ಸರ್ಕಾರದ ಕರ್ತವ್ಯ. ಅದರಲ್ಲೂ ಗೌರವ ಧನದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಅವರಿಗೆ ಅನ್ವಯವಾಗುವಂತೆ ₹50 ಲಕ್ಷದ ವಿಮೆ ಘೋಷಿಸಬೇಕು. ಅದೇ ರೀತಿ ಪತ್ರಕರ್ತರು ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದಾರೆ. ಅವರ ಹಿತ ಕೂಡ ಕಾಪಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಎಪಿಎಲ್‌, ಬಿಪಿಎಲ್‌ ಎಂಬ ತಾರತಮ್ಯ ಮಾಡದೇ ಎಲ್ಲಾ ಕುಟುಂಬಗಳಿಗೆ ಅನ್ವಯಿಸುವಂತೆ ಕನಿಷ್ಠ ಎರಡು ತಿಂಗಳಿಗೆ ಸಾಕಾಗುವಷ್ಟು ಆಹಾರ ಧಾನ್ಯವನ್ನು ಸರ್ಕಾರವೇ ಮನೆ ಮನೆಗೆ ತಲುಪಿಸಬೇಕು. ಎಲ್ಲಾ ಗ್ರಾಮಗಳಲ್ಲಿ ಆಹಾರ ಕೇಂದ್ರ ತೆರೆದು ನಿರ್ಗತಿಕರು, ಭಿಕ್ಷುಕರಿಗೆ ಪೂರೈಸಬೇಕು. ಇಲ್ಲವಾದಲ್ಲಿ ಇತ್ತೀಚೆಗೆ ಇಬ್ಬರು ಭಿಕ್ಷುಕರು ಸಾವನ್ನಪ್ಪಿದ್ದು, ಆ ಸಂಖ್ಯೆ ಹೆಚ್ಚಾಗಬಹುದು’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.