ADVERTISEMENT

ರಾಬಕೊವಿ: ಪ್ರಾತಿನಿಧ್ಯ ಕಳೆದುಕೊಳ್ಳುವುದೇ ಬಳ್ಳಾರಿ?

ಆರ್. ಹರಿಶಂಕರ್
Published 26 ಜೂನ್ 2025, 5:49 IST
Last Updated 26 ಜೂನ್ 2025, 5:49 IST
ಬಳ್ಳಾರಿ ಕೆಎಂಎಫ್‌ 
ಬಳ್ಳಾರಿ ಕೆಎಂಎಫ್‌    

ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ (ರಾಬಕೊವಿ) ಒಕ್ಕೂಟದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳಿಗೆ ಚುನಾವಣಾ ಘೋಷಣೆಯಾಗಿದ್ದು, ಒಕ್ಕೂಟದಲ್ಲಿ ‘ವಿಭಜಿತ ಬಳ್ಳಾರಿ’ ಜಿಲ್ಲೆಯು ಪ್ರಾತಿನಿಧ್ಯವನ್ನೇ ಕಳೆದುಕೊಳ್ಳುವ ಆತಂಕ ಎದುರಾಗಿದೆ.  

ಒಕ್ಕೂಟಕ್ಕೆ ಈ ಹಿಂದೆ 2024ರ ಜೂನ್‌ನಲ್ಲಿ ಚುನಾವಣೆ ಘೋಷಣೆಯಾಗಿತ್ತು. ಈ ವಿಷಯವು ಕೋರ್ಟ್‌ ಮೆಟ್ಟಿಲೇರಿ ಈಗ ಮತ್ತೆ ಜುಲೈ 10ಕ್ಕೆ ಚುನಾವಣೆ ನಿಗದಿ ಮಾಡಲಾಗಿದೆ. ಈ ಮಧ್ಯೆ ರಾಬಕೊವಿಯಲ್ಲಿನ ಹಲವು ನಿರ್ಧಾರಗಳು ವಿವಾದಕ್ಕೆ ಗುರಿಯಾಗಿವೆ. ಒಕ್ಕೂಟವನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರ ಮಾಡುವ ಹುನ್ನಾರಗಳು ನಡೆಯುತ್ತಿವೆ ಎಂದು ಆರೋಪಿಸಿ ಬಳ್ಳಾರಿಯ ‘ರೈತರ, ಹಾಲು ಉತ್ಪಾದಕರ ಹೋರಾಟ ಸಮಿತಿ’ ಭಾರಿ ಹೋರಾಟಗಳನ್ನೂ ಮಾಡಿದೆ.  

ಇದೆಲ್ಲದರ ನಡುವೆಯೇ ಹೊಸದಾಗಿ ಚುನಾವಣೆಯೇನೋ ಘೋಷಣೆಯಾಗಿದೆ. ಆದರೆ, ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ ಬಳ್ಳಾರಿ ಜಿಲ್ಲೆಯಿಂದ ಒಬ್ಬನೇ ಒಬ್ಬ ಪ್ರತಿನಿಧಿಯೂ ಆಯ್ಕೆಯಾಗದ ಸ್ಥಿತಿ ಇದೆ.   

ADVERTISEMENT

ರಾಬಕೊವಿಯಲ್ಲಿ ಒಟ್ಟು 12 ನಿರ್ದೇಶಕ ಸ್ಥಾನಗಳಿವೆ. ರಾಯಚೂರು–4, ಕೊಪ್ಪಳ–4 ಮತ್ತು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಸೇರಿ–4 ಸ್ಥಾನಗಳನ್ನು ನೀಡಲಾಗಿದೆ. ಪ್ರತಿ ಜಿಲ್ಲೆಯಿಂದ ತಲಾ ಮೂವರು ಸಾಮಾನ್ಯ ಅಭ್ಯರ್ಥಿಗಳು ಮತ್ತು ಒಬ್ಬರು  ಮಹಿಳಾ ನಿರ್ದೇಶಕರು ಆಯ್ಕೆಯಾಗಲಿದ್ದಾರೆ.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಪ್ರತ್ಯೇಕಗೊಂಡು ವರ್ಷಗಳು ಉರುಳುತ್ತಿದ್ದರೂ, ಎರಡೂ ಜಿಲ್ಲೆಗಳಿಗೆ ಸೇರಿ 4 ಸ್ಥಾನಗಳನ್ನು ಮಾತ್ರವೇ ನಿಗದಿ ಮಾಡಲಾಗಿದೆ. ಎರಡೂ ಜಿಲ್ಲೆಯವರು ಎಲ್ಲ 4 ಸ್ಥಾನಗಳಿಗೆ ಸ್ಪರ್ಧೆ ಮಾಡಲು ಅವಕಾಶವಿದೆ.   

ಇನ್ನೊಂದೆಡೆ, ರಾಬಕೊವಿ ವ್ಯಾಪ್ತಿಯಲ್ಲಿ ಒಟ್ಟು 857 ಹಾಲು ಉತ್ಪಾದಕ ಸಂಘಗಗಳಿವೆಯಾದರೂ, ಮತ ಚಲಾಯಿಸುವ ಅರ್ಹತೆ ಇರುವುದು 466 ಸಂಘಗಳ ಪ್ರತಿನಿಧಿಗಳಿಗೆ ಮಾತ್ರ. ಕೊಪ್ಪಳದಲ್ಲಿ 154, ರಾಯಚೂರಿನಲ್ಲಿ 55 ಮತಗಳಿವೆ. ವಿಜಯನಗರ ಜಿಲ್ಲೆಯು ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳ ಪೈಕಿ ಅತ್ಯಧಿಕ, ಅಂದರೆ 229 ಮತಗಳನ್ನು ಹೊಂದಿದೆ. ವಿಭಜಿತ ಬಳ್ಳಾರಿ ಜಿಲ್ಲೆ ಅತ್ಯಂತ ಕಡಿಮೆ, ಅಂದರೆ, ಕೇವಲ 28 ಮತಗಳನ್ನು ಹೊಂದಿದೆ.  

ಹೀಗಾಗಿ ಅತ್ಯಧಿಕ ಮತಗಳನ್ನು ಹೊಂದಿರುವ ವಿಜಯನಗರ ಜಿಲ್ಲೆಯ ಸ್ಪರ್ಧಿಗಳು ಅನಾಯಾಸವಾಗಿ 4 ಸ್ಥಾನಗಳನ್ನೂ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ. ಎರಡಂಕಿಯ ಮತಗಳನ್ನು ಹೊಂದಿರುವ ಬಳ್ಳಾರಿ ಜಿಲ್ಲೆಯ ಪ್ರತಿನಿಧಿಗಳು ಸ್ಪರ್ಧಾ ಕಣದಲ್ಲಿ ಧೂಳಿಪಟವಾಗುವುದು ಖಚಿತ ಎನ್ನಲಾಗಿದೆ. ಚುನಾವಣಾ ಅಧಿಸೂಚನೆಯಲ್ಲಿ ಬಳ್ಳಾರಿಗೆ 4 ಸ್ಥಾನ ಎಂದು ನಿಗದಿ ಮಾಡಿದ್ದರೂ, ಒಬ್ಬರೇ ಒಬ್ಬರೂ ಬಳ್ಳಾರಿಗರು ಗೆಲ್ಲದಂಥ ಸನ್ನಿವೇಶವಿದೆ. 

ಆಡಳಿತದ ಮೇಲೆ ಪ್ರಭಾವ:  ಒಕ್ಕೂಟದ ಕೇಂದ್ರ ಕಚೇರಿಯನ್ನು ತನ್ನ ಒಡಲಲ್ಲೇ ಇಟ್ಟುಕೊಂಡಿದ್ದರೂ, ಬಳ್ಳಾರಿ ಜಿಲ್ಲೆ ತನ್ನ ಒಬ್ಬ ಪ್ರತಿನಿಧಿಯನ್ನೂ ಆಡಳಿತ ಮಂಡಳಿಯಲ್ಲಿ ಹೊಂದಲಾಗದ ದೈನೇಸಿ ಪರಿಸ್ಥಿತಿಯಲ್ಲಿದ್ದು, ಒಕ್ಕೂಟದಲ್ಲಿ ಅಸಮಾನತೆ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಅದು ಆಡಳಿತ ಮಂಡಳಿಯ ನಿರ್ಧಾರಗಳ ಮೇಲೂ ಪ್ರಭಾವ ಭೀರುವ ಭೀತಿ ಸೃಷ್ಟಿಯಾಗಿದೆ.  

ರಾಜಕೀಯ ಇಚ್ಛಾಶಕ್ತಿ ಕೊರತೆ
ಒಂದು ಕಾಲಕ್ಕೆ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ 170ಕ್ಕೂ ಅಧಿಕ ಹಾಲು ಉತ್ಪಾದಕ ಸಂಘಗಳಿದ್ದವು ಎನ್ನಲಾಗಿದೆ. ಅದು ಇಂದು 92ಕ್ಕೆ ಕುಸಿದಿದೆ. ಇದರಲ್ಲಿ 28ಕ್ಕೆ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವಿದೆ. ಇನ್ನುಳಿದವು ದಿನಕ್ಕೆ 100 ಲೀಟರ್‌ ಹಾಲು ಉತ್ಪಾದನೆ ಮಾಡಲೂ ಶಕ್ತವಲ್ಲದೇ ಮತದಾನ ವಂಚಿತವಾಗಿವೆ.  ಹಾಲು ಉತ್ಪಾದಕ ಸಂಘಗಳು ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದ್ದರೂ ಅದಕ್ಕೆ ಕಾರಣ ಪರಿಹಾರ ಹುಡುಕುವಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳ ಯಾವುದೇ ಪ್ರಯತ್ನ ಮಾಡಿದಂತೆ ಇಲ್ಲ. ಇದನ್ನು ಮೊದಲೇ ಗಮನಿಸಿ ಚಿಕಿತ್ಸಕ ಕ್ರಮಗಳನ್ನು ಕೈಗೊಂಡಿದ್ದರೆ ಬಳ್ಳಾರಿಗೆ ಇಂದು ಇಂಥ ದುರ್ಗತಿ ಬರುತ್ತಿರಲಿಲ್ಲ ಎಂಬುದು ತೀರ ಹತ್ತಿರದವರ ಬೇಸರದ ನುಡಿಗಳು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.