ADVERTISEMENT

ಕಲಾವಿದರಿಗೆ ಸರ್ಕಾರಿ ಸೌಲಭ್ಯ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 13:10 IST
Last Updated 6 ಸೆಪ್ಟೆಂಬರ್ 2021, 13:10 IST
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಮುಖಂಡರು ಸೋಮವಾರ ಹೊಸಪೇಟೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಮುಖಂಡರು ಸೋಮವಾರ ಹೊಸಪೇಟೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ(ವಿಜಯನಗರ): ‘ರಂಗಭೂಮಿ ಕಲಾವಿದರಿಗೆ ಗುರುತಿನ ಚೀಟಿ, ಬಸ್‍ಪಾಸ್ ವಿನಾಯತಿ, ವಿಮಾ ಯೋಜನೆ ಸೇರಿದಂತೆ ಇತರೆ ಸರ್ಕಾರಿ ಸೌಲಭ್ಯ ಕೊಡಬೇಕು’ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಆಗ್ರಹಿಸಿದೆ.

ಒಕ್ಕೂಟದ ಮುಖಂಡರಾದ ಲಕ್ಷ್ಮಣ ಪೀರಗಾರ, ಪಿ.ಅಬ್ದುಲ್, ರಮೇಶ ಹಂಚಿನಮನೆ, ಸರದಾರ ಬಾರಿಗಿಡ, ಟಿ.ರಾಜಾರಾವ್, ರಾಜು ಕುಲಕರ್ಣಿ, ಅರುಣ್ ಕುಮಾರ್ ಮೇದಾರ್ ಸೋಮವಾರ ನಗರದ ಸಿದ್ದಲಿಂಗಪ್ಪ ಚೌಕಿಯ ಭಾವೈಕ್ಯತಾ ವೇದಿಕೆಯಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಬಳಿಕ ಸ್ಥಳಕ್ಕೆ ಬಂದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

‘ಕಲ್ಯಾಣ ಕರ್ನಾಟಕದ ರಂಗಭೂಮಿ, ಸಂಗೀತ, ನೃತ್ಯ, ಬಯಲಾಟ ಹಾಗೂ ಬುಡಕಟ್ಟು ಸೇರಿದಂತೆ ಇತರೆ ಪ್ರಕಾರಗಳ ಕಲಾವಿದರು ನಿರಂತರವಾಗಿ ಸರ್ಕಾರದ ಸೌಲಭ್ಯ, ಸಾಂಸ್ಕೃತಿಕ ಚಟುವಟಿಕೆಗಳಿಂದ ಅವಕಾಶ ವಂಚಿತರಾಗಿದ್ದಾರೆ. ನೆರೆಯ ಆಂಧ್ರ ಪ್ರದೇಶದಲ್ಲಿ ಕಲಾವಿದರಿಗೆ ಗುರುತಿನ ಚೀಟಿ ಸರ್ಕಾರದ ಇತರೆ ಸೌಕರ್ಯ ಕಲ್ಪಿಸಲಾಗಿದೆ. ಅದೇ ರೀತಿ ನಮ್ಮ ಭಾಗದವರಿಗೂ ಅವಕಾಶ ಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಪದ್ಮಶ್ರೀ, ಪದ್ಮಭೂಷಣ, ರಾಜ್ಯೋತ್ಸವ ಪುರಸ್ಕೃತ ಕಲಾವಿದರಿಗೆ ನಿರಂತರ ಮಾಸಾಶನ, ಮಾಸಾಶನ ವಯೋಮಿತಿ 58ರಿಂದ 50ಕ್ಕೆ ಇಳಿಸಬೇಕು. ಅದರ ಮೊತ್ತ ₹50,000ಕ್ಕೆ ಹೆಚ್ಚಿಸಬೇಕು. ನೂತನ ಜಿಲ್ಲೆಯಲ್ಲಿ ಶ್ರೀಕೃಷ್ಣದೇವರಾಯ ಕಲಾಭವನ ನಿರ್ಮಿಸಬೇಕು. ತತ್ವಪದಕಾರ ಕಡಕೋಳ ಮಡಿವಾಳಪ್ಪ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದರು.

‘ಕಲಾಪ್ರದರ್ಶನಕ್ಕೆ ನಗರದಲ್ಲಿ ಸುಸಜ್ಜಿತ ರಂಗಮಂದಿರ ಇಲ್ಲ. ನಗರಸಭೆ ಆವರಣದ ಈಗಿನ ರಂಗಮಂದಿರ ದಾಸ್ತಾನು ಮಳಿಗೆಯಂತಾಗಿದೆ. ರಂಗಮಂದಿರಕ್ಕೆ ಅನುವಾಗುವಂತೆ ಕಟ್ಟಡವನ್ನು ನಿರ್ಮಿಸಿಲ್ಲ.ಅದನ್ನು ದುರಸ್ತಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.