ಬಳ್ಳಾರಿ: ಅಪಾರ್ಟ್‌ಮೆಂಟ್‌ನ ವಿದ್ಯುತ್ ಸಂಪರ್ಕಕ್ಕಾಗಿ ಅಳವಡಿಸಲಾಗಿದ್ದ ತಂತಿ ತಾಗಿ ಬಾಲಕನೊಬ್ಬನಿಗೆ ವಿದ್ಯುದಾಘಾತವಾಗಿದ್ದು ಪರಿಣಾಮವಾಗಿ ಕೈಯನ್ನೇ ಕಳೆದುಕೊಂಡಿದ್ದಾನೆ.
ನಗರದ ಅವ್ವಂಬಾವಿಯ ವಿರಾಟ್‌ನಗರದಲ್ಲಿ ಈಚೆಗೆ ಈ ಘಟನೆ ನಡೆದಿದೆ. ಈ ಸಂಬಂಧ ಬಾಲಕ ವಿಶ್ವಘ್ನಾಚಾರಿ ತಂದೆ ಶಿವಾಚಾರಿ ಅವರು ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪಾರ್ಟ್‌ಮೆಂಟ್‌ನ ಮಾಲೀಕರಾದ ಸರಿತಪ್ರಿಯಾ ಮತ್ತು ಜೆಸ್ಕಾ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಸರಿತಪ್ರಿಯಾ ಅವರ 6 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ವಿದ್ಯುತ್ ಸಂಪರ್ಕ ನೀಡಲು ಇತ್ತೀಚೆಗೆ ಜೆಸ್ಕಾಂ ಅಧಿಕಾರಿಗಳು ತಂತಿ ಎಳೆದಿದ್ದರು. ಅದು ಶಿವಾಚಾರಿ ಅವರ ಮನೆಯ ಪಕ್ಕದಲ್ಲೇ ಹಾದು ಹೋಗಿತ್ತು. ತಂತಿಯನ್ನು ಎತ್ತರದಲ್ಲಿ ಎಳೆಯುವಂತೆಯೂ, ತಂತಿಗೆ ಪ್ಲಾಸ್ಟಿಕ್ ಕೊಳವೆ ಹಾಕುವಂತೆಯೂ ಶಿವಾಚಾರಿ ಅವರು ಮನವಿ ಮಾಡಿದ್ದರು ಎನ್ನಲಾಗಿದೆ. ಆದರೂ ಜೆಸ್ಕಾಂ ಅದನ್ನು ಉಪೇಕ್ಷಿಸಿದೆ ಎಂದು ಆರೋಪಿಸಲಾಗಿದೆ.
ಆ.27ರಂದು ಬಾಲಕ ವಿಶ್ವಘ್ನಾಚಾರಿ ಮನೆಯ ಮಹಡಿಯಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ತಂತಿ ಸ್ಪರ್ಷಿಸಿದೆ. ಇದರಿಂದ ಬಾಲಕ ಸ್ಥಳದಲ್ಲೇ ಮೂರ್ಚೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಬಿಎಂಸಿಆರ್‌ಸಿ (ವಿಮ್ಸ್)ಗೆ ದಾಖಲಿಸಲಾಗಿದೆ. ಚಿಕಿತ್ಸೆ ವೇಳೆ ಬಾಲಕನ ಕೈ ತೆಗೆಯಲಾಗಿದೆ. ಹೀಗಾಗಿ ಬಾಲಕ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾನೆ.
‘ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ತಂತಿ ಎಳೆಯುವಾಗಲೇ ಜೆಸ್ಕಾಂಗೆ ನಾವು ಹೇಳಿದ್ದೆವು. ಘಟನೆಗೆ ಜೆಸ್ಕಾಂ ಕರ್ತವ್ಯಲೋಪವೇ ಕಾರಣ. ಇದರಿಂದ ನನ್ನ ಮಗನ ಕೈ ಕತ್ತರಿಸಬೇಕಾಯಿತು. ಅಪಾರ್ಟ್‌ಮೆಂಟ್ ಮಾಲಕಿ ಸರಿತಪ್ರಿಯಾ ಮತ್ತು ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಶಿವಾಚಾರಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.