ADVERTISEMENT

ಕೆಮಿಸ್ಟ್ರಿ ಜತೆಗೆ ಮ್ಯಾಥಮ್ಯಾಟಿಕ್ಸ್ ಚೇಂಜ್‌

ಬಳ್ಳಾರಿ ಕ್ಷೇತ್ರದ ಚುನಾವಣೆ ಕುರಿತು ಶಾಸಕ ಸಿ.ಟಿ. ರವಿ ವ್ಯಾಖ್ಯಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 14:53 IST
Last Updated 18 ಏಪ್ರಿಲ್ 2019, 14:53 IST
ಸಿ.ಟಿ.ರವಿ
ಸಿ.ಟಿ.ರವಿ   

ಹೊಸಪೇಟೆ: ‘ಈ ಸಲ ಬಳ್ಳಾರಿ ಕ್ಷೇತ್ರದಲ್ಲಿ ಕೆಮಿಸ್ಟ್ರಿ ಜತೆಗೆ ಮ್ಯಾಥಮ್ಯಾಟಿಕ್ಸ್‌ ಕೂಡ ಚೇಂಜ್‌ ಆಗಲಿದೆ. ಉಪಚುನಾವಣೆಯಲ್ಲಿನ ಸೋಲನ್ನು ಬಡ್ಡಿ ಸಮೇತ ತೀರಿಸಿಕೊಳ್ಳುತ್ತೇವೆ’ ಎಂದು ಶಾಸಕ ಸಿ.ಟಿ. ರವಿ ಭರವಸೆ ವ್ಯಕ್ತಪಡಿಸಿದರು.

ಗುರುವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಉಪಚುನಾವಣೆಯಲ್ಲಿನ ಸೋಲಿನ ಬಳಿಕ ಪಕ್ಷದ ಕಾರ್ಯಕರ್ತರು ಹಗಲಿರುಳು ಸಂಘಟನೆಗೆ ಶ್ರಮಿಸಿದ್ದಾರೆ. ಸೋಲು ಗೆಲುವಾಗಿ ಬದಲಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಎಲ್ಲೆಡೆ ಮೋದಿಯವರ ದೊಡ್ಡ ಅಲೆ ಇದೆ. ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರು ಸರಳ, ಸಜ್ಜನಿಕೆಗೆ ಹೆಸರಾಗಿದ್ದಾರೆ. ಈ ಎಲ್ಲ ಅಂಶಗಳು ಗೆಲುವಿಗೆ ಪೂರಕವಾಗಲಿವೆ’ ಎಂದು ಹೇಳಿದರು.

‘ಉಪಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರಿಗೆ ಮಂತ್ರಿ ಮಾಡುವುದಾಗಿ ಅವರ ಪಕ್ಷದ ವರಿಷ್ಠರು, ಸಚಿವ ಡಿ.ಕೆ. ಶಿವಕುಮಾರ ಮೂಗಿಗೆ ತುಪ್ಪ ಸವರಿದ್ದರು. ಕೆಲವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಕೆಲವರಿಗೆ ಸಿಕ್ಕಿಲ್ಲ. ಭಿನ್ನಮತ ತಲೆದೋರಿದೆ. ಭಿನ್ನಮತೀಯ ಶಾಸಕರನ್ನು ಮೂರ್ಖರಾಗಿಸಲು ಮತ್ತೆ ತುಪ್ಪ ಹಿಡಿದು ಬರುತ್ತಿದ್ದಾರೆ. ಡಿ.ಕೆ. ಶಿವಕುಮಾರ ಕರೆನ್ಸಿ ಖಾಲಿಯಾಗಿದೆ. ಚುನಾವಣೆ ನಂತರ ರಾಜ್ಯ ಸರ್ಕಾರವೇ ಇರುವುದಿಲ್ಲ. ಮಂತ್ರಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ದೇವೇಂದ್ರಪ್ಪನವರು ಈ ಸಲ ಸಂಸದರಾಗುವುದು ಖಚಿತ’ ಎಂದರು.

ADVERTISEMENT

‘ಈ ಸಲ ನಿಂಬೆಹಣ್ಣು ಸರ್ಕಾರ ಉಳಿಸಲ್ಲ. ಕಾಂಗ್ರೆಸ್‌ ಹಾಗೂ ಜೆ.ಡಿ.ಎಸ್‌.ಗೆ ಅಧಿಕಾರದ ದಾಹ ಎಷ್ಟಿದೆ ಎಂಬುದು ಮೈತ್ರಿಯ ಬಂಡವಾಳ ಬಯಲಾಗಿದೆ. ಚುನಾವಣೆ ನಂತರ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವೇ ಸರ್ಕಾರ ಬೀಳಿಸುತ್ತದೆ. ಈ ಚುನಾವಣೆಯಲ್ಲಿ ಎರಡೂ ಪಕ್ಷಗಳ ಮೈತ್ರಿ ಅವುಗಳಿಗೆ ಒಳಪೆಟ್ಟು ಕೊಟ್ಟಿದೆ. ಕೆಲವೆಡೆ ಆಂತರಿಕವಾಗಿ ಕಿತ್ತಾಡಿದರೆ, ಕೆಲವು ಕಡೆ ಬಹಿರಂಗವಾಗಿಯೇ ಎರಡೂ ಪಕ್ಷಗಳ ಕಾರ್ಯಕರ್ತರು ಕಿತ್ತಾಡುತ್ತಿದ್ದಾರೆ. ಇದರಿಂದ ಬಿಜೆಪಿ ಗೆಲುವಿನ ದಾರಿ ಸುಗಮವಾಗಿದೆ’ ಎಂದು ಹೇಳಿದರು.

‘ಐ.ಟಿ. ದಾಳಿ ಭಯೋತ್ಪಾದಕ ದಾಳಿಯಲ್ಲ. ಎಲ್ಲ ಪಕ್ಷಗಳ ಮುಖಂಡರ ಮನೆಗಳ ಮೇಲೆ ದಾಳಿ ನಡೆಯುತ್ತಿವೆ. ದೇವೇಂದ್ರಪ್ಪನವರ ಮನೆ ಮೇಲೂ ದಾಳಿ ನಡೆದಿದೆ. ಅಕ್ರಮವಾಗಿ ಸಂಪತ್ತು ಸಂಗ್ರಹಿಸದಿದ್ದರೆ ಐ.ಟಿ. ದಾಳಿ ನಡೆದರೆ ಏಕೆ ಭಯ ಬೀಳಬೇಕು’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಅಭ್ಯರ್ಥಿ ವೈ. ದೇವೇಂದ್ರಪ್ಪ, ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ಮಾಜಿಶಾಸಕ ಎಚ್‌.ಆರ್.ಗವಿಯಪ್ಪ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ರಾಣಿ ಸಂಯುಕ್ತಾ, ಮಾಧ್ಯಮ ಸಂಚಾಲಕ ಶಂಕರ್ ಮೇಟಿ, ಮುಖಂಡರಾದ ಶ್ರೀನಿವಾಸ್‌ ರೆಡ್ಡಿ, ಬಸವರಾಜ ನಾಲತ್ವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.