ADVERTISEMENT

ಬಳ್ಳಾರಿ | ಪಾಲಿಕೆ ಕಸದ ವಾಹನ ಹರಿದು ಮಗು ಸಾವು

ವಾಹನ ಚಾಲಕ ಪರಾರಿ| ಶಾಸಕ, ಮೇಯರ್‌ರಿಂದ ವೈಯಕ್ತಿಕ ಪರಿಹಾರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 4:22 IST
Last Updated 30 ಜುಲೈ 2025, 4:22 IST
ದುರ್ಘಟನೆ ನಡೆದ ಸ್ಥಳದಲ್ಲೇ ಚಾಲಕ ವಾಹನವನ್ನು ಬಿಟ್ಟು ಹೋಗಿರುವುದು 
ದುರ್ಘಟನೆ ನಡೆದ ಸ್ಥಳದಲ್ಲೇ ಚಾಲಕ ವಾಹನವನ್ನು ಬಿಟ್ಟು ಹೋಗಿರುವುದು    

ಬಳ್ಳಾರಿ: ನಗರದ ಬಾಪೂಜಿ ನಗರದಲ್ಲಿ ಕಸ ಸಂಗ್ರಹಿಸುವ ವಾಹನ ಹರಿದು ಮೂರು ವರ್ಷದ ಮಗು ಮಗು ದಾರುಣ ಸಾವಿಗೀಡಾಗಿದೆ. ‌

ಬಾಪೂಜಿ ನಗರದ ಸಮರ ಹಾಗೂ ಶೈಲಜಾ ದಂಪತಿಯ ವಿಕಾಸ್‌ ಮೃತ ಮಗು. 

ಮಂಗಳವಾರ ಬೆಳಗ್ಗೆ ಬಾಪುಜಿ ನಗರದಲ್ಲಿ ಮನೆಯ ಮುಂದೆ ರಸ್ತೆ ಬದಿಯಲ್ಲಿ ವಿಕಾಸ್‌ ಆಟವಾಡುತ್ತಿದ್ದ. ಇದೇ ವೇಳೆಗೆ ಮಹಾನಗರ ಪಾಲಿಕೆಯ ಕಸ ಸಂಗ್ರಹಿಸುವ ಟಾಟಾ ಏಸ್ ವಾಹನ ಧ್ವನಿವರ್ಧಕ ಹಾಕಿಕೊಂಡು ಬಂದಿತ್ತು. ಮಗು ಆಟವಾಡುತ್ತಿರುವುದು ಕಾಣದ ಚಾಲಕ ಮಗುವಿನ ಮೇಲೆ ವಾಹನವನ್ನು ಹತ್ತಿಸಿದ್ದಾನೆ. ಮಗುವಿನ ತಲೆ ಮತ್ತು ಎದೆ ಮೇಲೆ ವಾಹನದ ಚಕ್ರಗಳು ಹರಿದಿದ್ದರಿಂದ ಮಗುವಿಗೆ ಗಂಭೀರ ಗಾಯಗಳಾಗಿದ್ದವು. 

ADVERTISEMENT

ಗಂಭೀರಗೊಂಡಿದ್ದ ಮಗುವನ್ನು ತಕ್ಷಣವೇ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್‌ಸಿ – ವಿಮ್ಸ್‌)ಕ್ಕೆ ಕರೆದೊಯ್ಯಲಾಯಿತಾದರೂ, ಮಗು ಆಸ್ಪತ್ರೆಗೆ ತಲುಪುವ ಹೊತ್ತಿಗೆ ಕೊನೆಯುಸಿರೆಳೆದಿತ್ತು. 

ಮಗುವಿನ ಮೇಲೆ ವಾಹನ ಹರಿಯುತ್ತಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಇತ್ತ ಮಗುವಿನ ಪರಿಸ್ಥಿತಿ ಕಂಡು ಪೋಷಕರು ಮತ್ತು ಸ್ಥಳೀಯರು ಪಾಲಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಚಾಲಕನ ಅಜಾಗರೂಕತೆಯಿಂದಲೇ ದುರ್ಘಟನೆ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಳ್ಳಾರಿ ನಗರದ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಚಾಲಕನಿಗಾಗಿ ಹುಡುಕಾಟ ನಡೆದಿದೆ. ಆತನ್ನು ಸೆರೆಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಪಾಲಿಕೆ ಚಾಲಕನ ವಿರುದ್ಧ ಮಾತ್ರ ಎಫ್‌ಐಆರ್‌ ದಾಖಲಿಸಲಾಗಿದೆ. ಒಂದು ವೇಳೆ ಆತನಿಗೆ ಚಾಲನಾ ಪರವಾನಗಿ ಇಲ್ಲದೇ ಇರುವುದು ಕಂಡು ಬಂದರೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

ಸುದ್ದಿ ತಿಳಿಯುತ್ತಲೇ ಶಾಸಕ ನಾರಾ ಭರತ್‌ ರೆಡ್ಡಿ, ಮೇಯರ್ ಮುಲ್ಲಂಗಿ ನಂದೀಶ್‌, ಪಾಲಿಕೆ ಆಯುಕ್ತ ಖಲೀಲ್‌ ಸಾಬ್‌ ವಿಮ್ಸ್‌ಗೆ ತೆರಳಿದರು. ಶಾಸಕ ಭರತ್‌ ರೆಡ್ಡಿ ವೈಯಕ್ತಿಕವಾಗಿ ₹50 ಸಾವಿರ ನೆರವು ನೀಡಿದರೆ, ಮುಲ್ಲಂಗಿ ನಂದೀಶ್‌ ಅವರೂ ತಕ್ಷಣದ ಖರ್ಚು ವೆಚ್ಚಗಳಿಗೆ ಹಣಕಾಸಿನ ನೆರವು ಒದಗಿಸಿದರು. 

ದುರ್ಘಟನೆಗೆ ಕಾರಣನಾದ ಚಾಲಕನನ್ನು ಕೆಲಸದಿಂದ ಅಮಾನತು ಮಾಡಿ, ಸೂಕ್ತ  ಕ್ರಮ ಕೈಗೊಳ್ಳಲಾಗುವುದು. ಪರಿಹಾರವನ್ನು ಕೂಡಲೇ ಒದಗಿಸಲು ತೀರ್ಮಾನ ಕೈಗೊಳ್ಳುತ್ತೇವೆ  ಎಂದು ಪಾಲಿಕೆ ಆಯುಕ್ತ ಖಲೀಲ್‌ ಸಾಬ್‌ ಮಾಹಿತಿ ನೀಡಿದರು.   

ವಿಮ್ಸ್‌ ಬಳಿ ಮೃತ ಮಗುವಿನ ಪೋಷಕರು, ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.  

ಮೃತ ಮಗು ವಿಕಾಸ್‌

ಸೂಕ್ತ ನೆರವಿನ ಭರವಸೆ ಮೃತ ಮಗುವಿನ ಕುಟುಂಬಕ್ಕೆ ಪಾಲಿಕೆ ವತಿಯಿಂದ ₹10 ಲಕ್ಷವನ್ನು ಪರಿಹಾರವಾಗಿ ಕೊಡಿಸಲಾಗುವುದು. ಇದರ ಜತೆಗೆ ವಾಹನದ ಥರ್ಟ್‌ ಪಾರ್ಟಿ ವಿಮೆ ಗುತ್ತಿಗೆದಾರನಿಂದಲೂ ಪರಿಹಾರ ಕೊಡಿಸಲು ಚಿಂತಿಸಲಾಗುತ್ತಿದೆ. ಒಟ್ಟಾರೆ ₹20 ಲಕ್ಷ ಹಣವನ್ನು ಮೃತ ಮಗುವಿನ ಕುಟುಂಬಕ್ಕೆ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮೇಯರ್‌ ಮುಲ್ಲಂಗಿ ನಂದೀಶ್‌ ಪ್ರಜಾವಾಣಿಗೆ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.