ADVERTISEMENT

ಬಳ್ಳಾರಿ | ದಸರಾ: ಖರೀದಿಗೆ ಬಿಡುವು ನೀಡಿದ ಮಳೆರಾಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 7:14 IST
Last Updated 1 ಅಕ್ಟೋಬರ್ 2025, 7:14 IST
ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ಕನಕದುರ್ಗೆ ದೇಗುಲದ ಬಳಿ ಮಂಗಳವಾರ ಹೂ ಖರೀದಿಯಲ್ಲಿ ತೊಡಗಿದ್ದ ಜನ 
ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ಕನಕದುರ್ಗೆ ದೇಗುಲದ ಬಳಿ ಮಂಗಳವಾರ ಹೂ ಖರೀದಿಯಲ್ಲಿ ತೊಡಗಿದ್ದ ಜನ    

ಬಳ್ಳಾರಿ: ಆಯುಧ ಪೂಜೆ ಹಾಗೂ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಹೂವು-ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಮಂಗಳವಾರ ಜೋರಾಗಿತ್ತು.

ಆಯುಧ ಪೂಜೆ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗಿತ್ತಾದರೂ ಜನರು ಮುಗಿಬಿದ್ದು ಖರೀದಿ ಮಾಡಿದರು.

ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲೂ ಹೂವು, ಬೂದುಕುಂಬಳ, ಬಾಳೆ ಕಂಬಕ್ಕೆ ಮಾರಾಟ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು. ಹಬ್ಬದ ಸಂಭ್ರಮದಲ್ಲಿ ಇರುವವರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ.

ADVERTISEMENT

ವಿಜಯದಶಮಿ ಹಬ್ಬದ ಮುನ್ನಾದಿನ ಆಯುಧ ಪೂಜೆ ಇದ್ದು, ಮನೆಗಳಲ್ಲಿನ ವೃತ್ತಿ ಸಂಬಂಧಿತ ಪರಿಕರಗಳು, ವಸ್ತುಗಳು, ವಾಹನಗಳು ಇತರ ಸಲಕರಣೆಗಳನ್ನು ಆಯುಧಗಳೆಂದೇ ಭಾವಿಸಿ, ಪೂಜೆ ಸಲ್ಲಿಸಲು ಜನರ ಸಿದ್ಧತೆಯಲ್ಲಿ ತೊಡಗಿದ್ದಾರೆ. 

ಚಂಡು ಹೂ ಸಾಮಾನ್ಯವಾಗಿ ಕೆ.ಜಿಗೆ ₹60 ರಿಂದ 70 ಇರುತ್ತದೆ. ಹಬ್ಬದ ಹಿನ್ನೆಲೆ ₹100 ದಾಟಿತ್ತು. ಬಾಳೆ ದಿಂಡು ದೊಡ್ಡ ಗಾತ್ರದ್ದಾರೆ ಜೋಡಿ ₹100, ಚಿಕ್ಕದಾದರೆ ₹50 ಎಂದು ವ್ಯಾಪಾರಸ್ತರು ಹೇಳುತ್ತಿದ್ದರು. ಸೇಬು ₹120–150, ಮೂಸಂಬಿ ₹100–120, ಬಾಳೆಹಣ್ಣು ₹100–120 ಇತ್ತು. 

ಹೂವು, ಹಣ್ಣು ದುಬಾರಿ

ಹೊಸಪೇಟೆ (ವಿಜಯನಗರ): ನಗರದ ಏಳು ಕೇರಿಗಳ ಅಮ್ಮಂದಿರ ಜತೆಗೆ ಇತರ ಕಡೆಗಳಲ್ಲಿ ಸಹ ದಸರಾ ಹಬ್ಬದ ರಂಗು ಜೋರಾಗಿಯೇ ಇದ್ದು, ಮಹಾನವಮಿ, ಆಯುಧ ಪೂಜೆಯ ಖರೀದಿ ಭರಾಟೆಗೆ ಮಳೆ ಅಡ್ಡಿ ಉಂಟುಮಾಡದ ಕಾರಣ ಮಾರುಕಟ್ಟೆಯಲ್ಲಿ ರಂಗೇರಿತ್ತು.

ಮಂಗಳವಾರ ಬೆಳಿಗ್ಗೆಯಿಂದಲೇ ಜನ ಹೂವಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆಗಳತ್ತ ತೆರಳಿ ತಮಗೆ ಅಗತ್ಯವಿರುವ ಹೂ, ಹಣ್ಣು, ಬಾಳೆಕಂಬ, ಕುಂಬಳಕಾಯಿ ಖರೀದಿಯಲ್ಲಿ ತೊಡಗಿದರು.

‘ಹಣ್ಣುಗಳ ದರ ಈ ಬಾರಿ ಅಷ್ಟೇನೂ ಹೆಚ್ಚಾಗಿಲ್ಲ, ಸೇಬು ಕಿಲೋಗೆ ₹130, ಮೂಸಂಬಿ ₹60ರಿಂದ 70, ಉತ್ತಮ ಗುಣಮಟ್ಟದ ದಾಳಿಂಬೆಗೆ ₹200 ಧಾರಣೆ ಇದೆ’ ಎಂದು ಹಣ್ಣಿನ ವ್ಯಾಪಾರಿ ಮಲ್ಲಪ್ಪ ಹೇಳಿದರು. 

ಹೂ ಧಾರಣೆ: ‘ಮಲ್ಲಿಗೆ ಕೆ.ಜಿ.ಗೆ ₹1000ಕ್ಕೆ ಮಾರಾಟವಾಗುತ್ತಿತ್ತು. ಮಲ್ಲಿಗೆ ಮಾರಿಗೆ ₹200, ಮಳಕ್ಕೆ ₹50, ಕನಕಾಂಬರ ಸಹ ₹200ಕ್ಕೆ ಮಾರಾಟವಾಯಿತು. ಕುಂಬಳಕಾಯಿ ಒಂದಕ್ಕೆ ₹120ರಿಂದ 250ರವರೆಗೆ ದರ ಇತ್ತು. ಬಾಳೆ ಕಂಬ ಚಿಕ್ಕದು ಜೋಡಿಗೆ ₹50, ದೊಡ್ಡದು ಜೋಡಿಗೆ ₹80ರಿಂದ 100ಕ್ಕೆ ಮಾರಾಟವಾಯಿತು.

ಕಳೆದ ಎರಡು, ಮೂರು ದಿನಗಳಿಂದ ಆಗಾಗ ಮಳೆ ಸುರಿಯುತ್ತಲೇ ಇತ್ತು, ಹೀಗಾಗಿ ವ್ಯಾಪಾರ ವಹಿವಾಟಿಗೆ ಸ್ವಲ್ಪ ಧಕ್ಕೆ ಉಂಟಾಗಿತ್ತು, ಮಹಾನವಮಿಗೆ ಸಿದ್ಧತೆಯಲ್ಲಿದ್ದ ಜನರಿಗೆ ಮಳೆ ಬಿಡುವು ಕೊಟ್ಟಿದ್ದರಿಂದ ಜನರಿಗೆ ಖುಷಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.