ADVERTISEMENT

ನಿರ್ಮಲಾ ಸೀತಾರಾಮನ್ ಆಪ್ತ ಕಾರ್ಯದರ್ಶಿಯಾಗಿ ಬಳ್ಳಾರಿ ಡಿಸಿ ನಕುಲ್ ನಿಯೋಜನೆ

ಬಳ್ಳಾರಿ ಜಿಲ್ಲಾಡಳಿತದಿಂದ ರಾಷ್ಟ್ರ ರಾಜಧಾನಿಗೆ!

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 14:48 IST
Last Updated 17 ಡಿಸೆಂಬರ್ 2020, 14:48 IST
 ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌
ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌    

ಬಳ್ಳಾರಿ: ರಾಜ್ಯದಲ್ಲೇ ಮೊದಲ ಬಾರಿಗೆ ಕೋವಿಡ್‌ ನಿಯಂತ್ರಣದ ಖರ್ಚು ವೆಚ್ಚಗಳ ಲೆಕ್ಕಪರಿಶೋಧನೆ ವರದಿ ತಯಾರಿಸಿ ಗಮನ ಸೆಳೆದಿದ್ದಇಲ್ಲಿನ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಕೇಂದ್ರ ಹಣಸಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಆಪ್ತ ಕಾರ್ಯದರ್ಶಿಯಾಗಿ ಕೇಂದ್ರ ಸೇವೆಗೆ ನಿಯೋಜನೆಗಂಡಿದ್ದಾರೆ.

‘ರಾಜ್ಯದ ಅತ್ಯುತ್ತಮ ಐಎಎಸ್‌ ಅಧಿಕಾರಿಗಳಲ್ಲಿ ಅವರೂ ಒಬ್ಬರಾಗಿದ್ದರಿಂದಲೇ ಈ ಅವಕಾಶ ದೊರಕಿದೆ’ ಎಂದು ರಾಜ್ಯ ಸರ್ಕಾರದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ನಿಯಮಗಳ ಅನುಸಾರವಷ್ಟೇ ಕೆಲಸ ಮಾಡುವ ಪ್ರವೃತ್ತಿಯಿಂದಲೂ ಅವರು ಹೆಸರುಗಳಿಸಿದ್ದರು.

2019ರ ಜೂನ್‌ 19ರಂದು ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಬರುವ ಮುನ್ನ ಕೆಲ ತಿಂಗಳ ಕಾಲ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಆ ಅವಧಿಯಲ್ಲಿ ತಮ್ಮ ಪತ್ನಿಯನ್ನು ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಗಮನ ಸೆಳೆದಿದ್ದರು.

ADVERTISEMENT

ಅವರ ಈ ಮಾದರಿ ನಡೆಯಿಂದ, ನಂತರ ಬಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ರಾಜೇಂದ್ರ ಅವರೂ ತಮ್ಮ ಪತ್ನಿಯನ್ನು ಹೆರಿಗೆ ಸಲುವಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಮೈಸೂರಿನಲ್ಲಿ ಬಿಇ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಶನ್‌ ಪದವಿ ಪಡೆದಿರುವ ನಕುಲ್‌ ಕುಶಾಲನಗದವರು. 2010ರ ಐಎಎಸ್‌ ಬ್ಯಾಚ್‌ನಲ್ಲಿ 31ನೇ ರ್‍ಯಾಂಕ್ ಪಡೆದಿದ್ದರು. ಐಆರ್‌ಎಸ್‌ಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಲೇ ಐಎಎಸ್‌ಗೆ ಕಠಿಣ ಅಭ್ಯಾಸ ನಡೆಸಿ ಯಶಸ್ಸು ಪಡೆದು ಗಮನ ಸೆಳೆದಿದ್ದರು.

ಜಿಲ್ಲಾ ಖನಿಜ ಪ್ರತಿಷ್ಠಾನದ ಕ್ರಿಯಾಯೋಜನೆ ತಯಾರಿಕೆ, ಕೊರೊನಾ ನಿಯಂತ್ರಣದ ಕಾರ್ಯದಲ್ಲಿ ಅವರ ಕಾರ್ಯ ಶ್ಲಾಘನೆಗೆ ಪಾತ್ರವಾಗಿತ್ತು.

‘ಹದಿನೈದು ದಿನದ ಹಿಂದೆ ಪ್ರಧಾನಮಂತ್ರಿ ಕಚೇರಿ ಅಭಿಪ್ರಾಯ ಕೇಳಿತ್ತು. ಕೇಂದ್ರ ಸೇವೆ ಸಲ್ಲಿಸಲು ಒಪ್ಪಿಕೊಂಡಿದ್ದೆ. ಈಗ ಅವಕಾಶ ದೊರಕಿದೆ. ಸಾರ್ವಜನಿಕ ಆಡಳಿತದ ಹೊಸ ಪಾಠಗಳನ್ನು ಕಲಿಯಲು ಇದೊಂದು ಅಪರೂಪದ ಅವಕಾಶ’ ಎಂದು ನಕುಲ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.