ADVERTISEMENT

ಬಳ್ಳಾರಿ: ಮರಳು ಅಕ್ರಮ ತಡೆಗೆ ಗಸ್ತು ಬಿಗಿ

‘ಮರಳು ಸಭೆ’ ನಡೆಸಿದ ಜಿಲ್ಲಾಧಿಕಾರಿಯಿಂದ ಆಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 4:27 IST
Last Updated 20 ಡಿಸೆಂಬರ್ 2025, 4:27 IST
nagendra prasad k 
nagendra prasad k    

ಪ್ರಜಾವಾಣಿ ವಾರ್ತೆ

ಬಳ್ಳಾರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು, ಗ್ರಾವೆಲ್‌ ಗಣಿಗಾರಿಕೆ, ಅಕ್ರಮ ಸಾಗಾಟ ತಡೆಗೆ ಜಿಲ್ಲಾ ಗಣಿ ಕಾರ್ಯಪಡೆ ಮತ್ತು ಮರಳು ಸಮಿತಿಯ ಸದಸ್ಯರು ಗಸ್ತು ಕಾರ್ಯವನ್ನು ಬಿಗಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಇತ್ತೀಚೆಗೆ ತಾಕೀತು ಮಾಡಿದ್ದಾರೆ. 

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಬಳ್ಳಾರಿ ಉಪವಿಭಾಗಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಸೇರಿ ಹಲವರು ಹಾಜರಿದ್ದರು. 

ADVERTISEMENT

ಒಂದೇ ಪರ್ಮಿಟ್‌ನಲ್ಲಿ ಹಲವು ಬಾರಿ ಮರಳು ಮತ್ತು ಮುರಂ/ಗ್ರಾವೆಲ್ ಸಾಗಣೆ ಆಗುತ್ತಿರುವ ಬಗ್ಗೆ ಜನರಿಂದ ದೂರುಗಳು ಬಂದಿರುವುದಾಗಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಸಭೆಯಲ್ಲಿ ಪ್ರಸ್ತಾಪಿಸಿದರು ಎಂದು ಲಭ್ಯ ದಾಖಲೆಗಳು ಹೇಳುತ್ತಿವೆ. ಮರಳು, ಗ್ರಾವೆಲ್‌ ತುಂಬಿದ ವಾಹನಗಳು ನಗರ ಪ್ರದೇಶಗಳಲ್ಲಿ ರಾತ್ರಿಯೂ ಸಂಚರಿಸುತ್ತಿರುವ ಬಗ್ಗೆ, ಅನಧಿಕೃತವಾಗಿ ಸಾಗಾಣೆ  ಮಾಡುತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಪ್ರಸ್ತಾಪಿಸಿದ್ದರು. 

ಜಿಲ್ಲಾ ಗಣಿ ಕಾರ್ಯಪಡೆ ಮತ್ತು ಜಿಲ್ಲಾ, ತಾಲ್ಲೂಕು ಮರಳು ಸಮಿತಿಯ ಸದಸ್ಯರು ಗಸ್ತು ಕಾರ್ಯವನ್ನು ಬಿಗಿಗೊಳಿಸಿ ಅಕ್ರಮಗಳನ್ನು ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿಯು ಸಹಾಯಕ ಆಯುಕ್ತರು ಹಾಗೂ ಗಣಿ ಇಲಾಖೆ ಉಪ ನಿರ್ದೇಶಕರಿಗೆ ತಾಕೀತು ಮಾಡಿದ್ದಾರೆ. 

ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಅಕ್ರಮ, ಮರಳು ಪೂರೈಕೆಗೆ ಎದುರಾಗಿರುವ ಸಮಸ್ಯೆ ಮತ್ತು ಅದರಿಂದ ಬಳ್ಳಾರಿ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಎದುರಾಗಿದ್ದ ಮರಳು ಅಭಾವದ ಕುರಿತು ‘ಪ್ರಜಾವಾಣಿ’ಯ ನ. 24ರ ಸಂಚಿಕೆಯಲ್ಲಿ ‘ಮತ್ತೆ ಮರಳು ಅಭಾವ: ಜನರ ಪರದಾಟ’ ಎಂಬ ವರದಿ ಪ್ರಕಟವಾಗಿತ್ತು. ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಅವರು ಈಚೆಗೆ ಅಧಿಕಾರಿಗಳ ಸಭೆ ನಡೆಸಿದ್ದು, ಅಕ್ರಮಗಳ ತಡೆಗೆ ಹಲವು ಕ್ರಮಗಳನ್ನು ಸೂಚಿಸಿದ್ದಾರೆ. 

Quote - ಮರಳಿನ ಸಮಸ್ಯೆ ಹಿನ್ನೆಲೆ ಸಭೆ ನಡೆಸಲಾಗಿತ್ತು. ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಾಗಿದೆ. ಮರಳಿನ ಸರಾಗ ಪೂರೈಕೆ ಅಕ್ರಮ ತಡೆಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗಿದೆ  ನಾಗೇಂದ್ರ ಪ್ರಸಾದ್ ಕೆ. ಜಿಲ್ಲಾಧಿಕಾರಿ ಬಳ್ಳಾರಿ

ಮೀಸಲಿಟ್ಟರೂ ಬಳಕೆಯಾಗದ ಸರ್ಕಾರಿ ಬ್ಲಾಕ್‌ಗಳು

ಸರ್ಕಾರಿ ಕಾಮಗಾರಿಗಳಿಗೆ ಜಿಲ್ಲೆಯಲ್ಲಿ ಮೂರು ಮರಳು ಬ್ಲಾಕ್‌ಗಳನ್ನು ಮೀಸಲಿಟ್ಟಿರುವುದಾಗಿ ಉಪ ನಿರ್ದೇಶಕರು ಸಭೆಯಲ್ಲಿ ತಿಳಿಸಿದ್ದಾರೆ. ಆದರೆ ಇಲ್ಲಿ ಲೋಕೋಪಯೋಗಿ ಇಲಾಖೆ ಮರಳುಗಾರಿಕೆಯನ್ನೇ ನಡೆಸಿಲ್ಲ ಎಂಬುದು ದಾಖಲೆಗಳಿಂದ ಗೊತ್ತಾಗಿದೆ.   ಈ ಬ್ಲಾಕ್‌ಗಳಲ್ಲಿ ಗಣಿಗಾರಿಕೆ ಮಾಡಲು ಇಲಾಖೆಯ ಮಾರ್ಗದರ್ಶನ ಕೋರಿರುವುದಾಗಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಸಭೆಗೆ ತಿಳಿಸಿದರು ಎನ್ನಲಾಗಿದೆ.

ಆದರೆ ಇದಕ್ಕೆ ಪರ್ಯಾರ ಮಾರ್ಗ ಹೇಳಿರುವ ಜಿಲ್ಲಾಧಿಕಾರಿ ಇತರ ಜಿಲ್ಲೆಗಳಲ್ಲಿ ವ್ಯವಸ್ಥೆ ಹೇಗಿದೆ ಎಂಬುದರ ಮಾಹಿತಿ ಸಂಗ್ರಹಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ.  ಗಣಿ ಇಲಾಖೆಯಿಂದ ನೀಡಲಾಗುವ ಖನಿಜ ಸಾಗಾಣಿಕೆ ಪರವಾನಿಗೆ ಮೂಲಕವೇ ಸರ್ಕಾರಿ ಕಾಮಗಾರಿಗಳಿಗೆ ಮರಳು ಗ್ರಾವೆಲ್‌ ಪಡೆದು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈ ಬಗ್ಗೆ ಸಂಬಂಧಿಸಿದವರಿಗೆ ಜಿಲ್ಲಾಧಿಕಾರಿ ಕಾರ್ಯಾಲಯದಿಂದ 'ಜ್ಞಾಪನ’ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಸೂಚಿಸಿದ್ದಾರೆ. 

Cut-off box - ಮರು ಟೆಂಡರ್‌ಗೆ ಸೂಚನೆ  ಜಿಲ್ಲೆಯಲ್ಲಿ ಒಟ್ಟು 13 ಮರಳು ಬ್ಲಾಕ್‌ಗಳನ್ನು ಗುರುತಿಸಿ ಸರ್ಕಾರ ಕಳೆದ ವರ್ಷ ಅಧಿಸೂಚನೆ ಹೊರಡಿಸಿತ್ತು. ಈ ಪೈಕಿ 3 ಬ್ಲಾಕ್‌ಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಮೀಸಲಿಟ್ಟು ಉಳಿದ 10 ಬ್ಲಾಕ್‌ಗಳನ್ನು ಹರಾಜಿಗೆ ಇಡಲಾಗಿತ್ತು. ಇದರಲ್ಲಿ 5 ಬ್ಲಾಕ್‌ಗಳು ಮಾತ್ರವೇ ಹರಾಜಾಗಿದ್ದು ಇನ್ನೂ 5 ಬ್ಲಾಕ್‌ಗಳು ಹಾಗೆಯೇ ಉಳಿದುಕೊಂಡಿವೆ. ಈ 5 ಬ್ಲಾಕ್‌ಗಳನ್ನು ಕೂಡಲೇ ಮರುಟೆಂಡರ್‌ ಕರೆದು ಹರಾಜು ಹಾಕುವಂತೆ ಜಿಲ್ಲಾಧಿಕಾರಿ ಗಣಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಇದರಿಂದ ಮರಳು ಲಭ್ಯತೆ ಹೆಚ್ಚಾಗಿ ಅಕ್ರಮ ತಗ್ಗಲಿದೆ ಎಂಬುದು ಅಧಿಕಾರಿಗಳ ನಿಲುವಾಗಿದೆ.  ಈಗಾಗಲೇ ಹರಾಜಾಗಿರುವ ಐದು ಬ್ಲಾಕ್‌ಗಳ ಪೈಕಿ ಆಶಯ ಪತ್ರ (ಲೆಟರ್‌ ಆಫ್‌ ಇಂಟೆಂಟ್‌) ಪಡೆದಿರುವ ಎರಡು ಬ್ಲಾಕ್‌ಗಳಿಗೆ ಕೂಡಲೇ ಪರಿಸರ ‘ವಿಮೋಚನಾ ಪತ್ರ’ ಪಡೆಯುವಂತೆಯೂ ಒಂದು ತಿಂಗಳ ಒಳಗಾಗಿ ಮರಳುಗಾರಿಕೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.