
ಬಳ್ಳಾರಿ: ಜಿಲ್ಲೆಯಲ್ಲಿ ಜರುಗುವ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾಂವಿಧಾನಿಕ ಶಿಷ್ಟಾಚಾರ ಭಂಗವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳಿಗೆ ಜಿಲ್ಲಾಡಳಿತ ಇತ್ತೀಚೆಗೆ ಪತ್ರ ಬರೆದು ಎಚ್ಚರಿಕೆ ನೀಡಿದೆ.
ಜಿಲ್ಲೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿಲ್ಲಾಡಳಿತಕ್ಕೆ ಇತ್ತೀಚೆಗೆ ನೀಡಿದ ಸೂಚನೆ ಆಧರಿಸಿ ಜಿಲ್ಲಾಧಿಕಾರಿಯು ಜ. 6ರಂದು ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಶಿಷ್ಟಾಚಾರದ ಸಂಬಂಧ ನಿರ್ದೇಶನಗಳನ್ನು ನೀಡಿದ್ದಾರೆ.
ಏನಿದರ ಹಿನ್ನೆಲೆ
ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಕುರಿತಂತೆ ಯಾವುದೇ ಮಾಹಿತಿ ನೀಡದೆ, ತ್ವರಿತಗತಿಯಲ್ಲಿ ಜಿಲ್ಲೆಯ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳಿಗೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನೀಡುವುದು, ಕೊನೆ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಪಡಿಸುವುದು, ಸ್ಥಳೀಯ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಆಯೋಜಿಸಬೇಕಿದ್ದ ಕಾರ್ಯಕ್ರಮಗಳನ್ನು ಯಾವುದೇ ಮಾಹಿತಿ ಇಲ್ಲದೆ ಆಯೋಜಿಸುವುದೂ ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪದೇ ಪದೇ ಸಾಂವಿಧಾನಿಕ ಶಿಷ್ಟಾಚಾರದ ಉಲ್ಲಂಘನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸಂವಿಧಾನಿಕ ಶಿಷ್ಟಾಚಾರದ ಉಲ್ಲಂಘನೆ ಮರುಕಳಿಸದ ರೀತಿಯಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಹಾಗೂ ಮುಂದಿನ ದಿನಗಳಲ್ಲಿ ಸಾಂವಿಧಾನಿಕ ಶಿಷ್ಟಾಚಾರದ ಉಲ್ಲಂಘನೆ ಮಾಡುವ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲಿಸುವ ಕುರಿತು, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಆಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಪತ್ರ ಬರೆದು ತಿಳಿಸಿದ್ದರು.
ಏನಿದು ಶಿಷ್ಟಾಚಾರ ಪಾಲನೆ? : ಜಿಲ್ಲಾ ಮಟ್ಟದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ ಆಯೋಜಿಸುವ ವೇಳೆ ಸೂಚಿತ ನಿಯಮಾವಳಿಗಳನ್ನು ಪಾಲಿಸಬೇಕು. ಕಾರ್ಯಕ್ರಮದ ಕುರಿತು ಜಿಲ್ಲಾಧಿಕಾರಿ, ಶಿಷ್ಟಾಚಾರ ಅಧಿಕಾರಿಯು ಕೂಲಂಕಷವಾಗಿ ಪರಿಶೀಲಿಸಬೇಕು. ಪೂರ್ವಭಾವಿ, ಸಾರ್ವಜನಿಕ ಆಲಿಕೆ ಸಭೆಗಳನ್ನು ನಡೆಸಬೇಕು. ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು. ಚುನಾಯಿತ ಜನಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆಯನ್ನು ನೀಡುವ ಕುರಿತು ಚರ್ಚಿಸಬೇಕಾಗುತ್ತದೆ. ಕಾರ್ಯಕ್ರಮದ ರೂಪುರೇಷೆಗಳ ಕುರಿತು ಅವರೊಂದಿಗೆ ಚರ್ಚಿಸಬೇಕಾಗುತ್ತದೆ. ಆದರೆ, ಬಳ್ಳಾರಿಯಲ್ಲಿ ಇತ್ತೀಚೆಗೆ ಕೆಲ ಕಾರ್ಯಕ್ರಮಗಳಲ್ಲಿ ಇದೆಲ್ಲದರ ಉಲ್ಲಂಘನೆಯಾದ ಆರೋಪವಿದೆ.
ಜಿಲ್ಲೆಯ ಜನಪ್ರತಿನಿಧಿಗಳ ದೂರು ಆಧರಿಸಿದ ಮುಖ್ಯಕಾರ್ಯದರ್ಶಿಗಳ ಪತ್ರ ಮತ್ತು ಶಿಷ್ಟಾಚಾರಕ್ಕೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಶಿಷ್ಟಾಚಾರ ಪಾಲನೆಯಲ್ಲಿನ ಲೋಪ ಸಹಿಸಲ್ಲ.ನಾಗೇಂದ್ರ ಪ್ರಸಾದ್ ಕೆ. ಜಿಲ್ಲಾಧಿಕಾರಿ ಬಳ್ಳಾರಿ
ಶಿಷ್ಟಾಚಾರದ ಪ್ರಶ್ನೆ ಉದ್ಘವಿಸಿದ್ದು ಎಲ್ಲಿ?
ಬಳ್ಳಾರಿ ನಗರದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಇತ್ತೀಚೆಗೆ ಸ್ಥಾಪನೆ ಮಾಡಲಾಯಿತು. ಪ್ರತಿಮೆ ಸ್ಥಾಪನೆ ಮತ್ತು ಅನಾವರಣ ಕಾರ್ಯಕ್ರಮದ ಆಯೋಜನೆ ಆಹ್ವಾನ ಪತ್ರಿಕೆ ಮುದ್ರಣ ಸೇರಿದಂತೆ ಹಲವು ಹಂತಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದ ಆರೋಪಗಳು ಕೇಳಿ ಬಂದಿವೆ. ಈ ಕುರಿತು ಜನಪ್ರತಿನಿಧಿಗಳಿಂದ ಸರ್ಕಾರಕ್ಕೆ ದೂರುಗಳು ತಲುಪಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲಾಡಳಿತಕ್ಕೆ ಇತ್ತೀಚೆಗೆ ಪತ್ರ ಬರೆದಿದೆ. ಜಿಲ್ಲೆಯಲ್ಲಿ ಸಂವಿಧಾನಿಕ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.