ಬಳ್ಳಾರಿ: ‘ಸಚಿವ ಜಮೀರ್ ಅಹಮದ್ ಖಾನ್ ಅವರೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.
ಸಚಿವ ರಹೀಂ ಖಾನ್ ಅವರನ್ನು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ನೇಮಿಸಿರುವ ಕುರಿತು ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು. ಆದರೆ, ಈ ವಿಚಾರದಲ್ಲಿ ಹಲವು ಗೊಂದಲ ಮೂಡಿವೆ. ಈ ಹಿನ್ನೆಲೆಯಲ್ಲಿ ಗೊಂದಲಗಳಿಗೆ ಬಿ. ನಾಗೇಂದ್ರ ತೆರೆ ಎಳೆದಿದ್ದಾರೆ.
‘ಆ. 15ರ ಸ್ವಾತಂತ್ರ್ಯೋತ್ಸದ ಧ್ವಜಾರೋಹಣಕ್ಕೆ ಮಾತ್ರವೇ ರಹೀಂ ಖಾನ್ ಅವರನ್ನು ನಿಯೋಜಿಸಲಾಗಿದೆ. ಜಮೀರ್ ಅಹಮದ್ ಅವರು ಎರಡು ಜಿಲ್ಲೆಗಳಿಗೆ ಉಸ್ತುವಾರಿಯಾಗಿದ್ದಾರೆ. ಹೀಗಾಗಿ ಬಳ್ಳಾರಿಯಲ್ಲಿ ಧ್ವಜಾರೋಹಣ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಹೀಂ ಖಾನ್ ಅವರನ್ನು ನಿಯೋಜಿಸಲಾಗಿದೆಯೇ ಹೊರತು ಉಸ್ತುವಾರಿಯನ್ನು ಬದಲಿಸಿಲ್ಲ’ ಎಂದು ಹೇಳಿದರು.
‘ಉಸ್ತುವಾರಿ ಬದಲಾವಣೆಗೆ ಸಂಬಂಧಿಸಿದ ಆದೇಶ ಪತ್ರ ನಕಲಿ ಇರಬಹುದು’ ಎಂದೂ ಅವರು ಹೇಳಿದರು.
ಈ ಮಧ್ಯೆ ಶುಕ್ರವಾರ ಮತ್ತೊಂದು ಆದೇಶ ಹೊರಡಿಸಿರುವ ಸರ್ಕಾರ, ಬಳ್ಳಾರಿ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಲು ರಹೀಂ ಖಾನ್ ಅವರನ್ನು ನಿಯೋಜಿಸಿರುವುದಾಗಿ ಹೇಳಿದೆ.
ಗೊಂದಲದ ಗೂಡು: ಬಳ್ಳಾರಿ ಜಿಲ್ಲಾ ಉಸ್ತುವಾರಿ ಗೊಂದಲಗಳಿಗೆ ಈಗಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಜನಪ್ರತಿನಿಧಿಗಳಿಂದಲೂ ಸಮರ್ಪಕ ಉತ್ತರ ಬಂದಿಲ್ಲ.
ಹಾಸನದ ಉಸ್ತುವಾರಿಯನ್ನು ಸಚಿವ ಕೆ.ಎನ್ ರಾಜಣ್ಣ ನಿರಾಕರಿಸಿದ್ದು, ಅವರು ಬಳ್ಳಾರಿ ಜಿಲ್ಲೆ ಉಸ್ತುವಾರಿ ಬಯಸಿದ್ದರು ಎಂದು ಹೇಳಲಾಗಿದೆ. ರಾಜಣ್ಣ ವಾಲ್ಮೀಕಿ ಸಮುದಾಯದ ನಾಯಕರಾಗಿದ್ದು, ಅವರನ್ನು ಬಳ್ಳಾರಿಗೆ ನಿಯೋಜಿಸಿದರೆ ರಾಜಕೀಯ ವಿರೋಧಗಳು ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ನಿರಾಕರಿಸಲಾಗಿದೆ. ಅವರಿಂದ ತೆರವಾಗಿರುವ ಹಾಸನದ ಉಸ್ತುವಾರಿ ಜಾಗಕ್ಕೆ ಸಚಿವ ಕೃಷ್ಣಬೈರೇಗೌಡ ಅವರನ್ನು ಸರ್ಕಾರ ನಿಯೋಜಿಸಿ, ಅದರ ಜತೆಗೆ, ಬಳ್ಳಾರಿ ಉಸ್ತುವಾರಿಯನ್ನು ರಹೀಂ ಖಾನ್ ಅವರಿಗೆ ನೀಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು ಎನ್ನಲಾಗಿದೆ. ಆದರೆ, ಈ ಮಧ್ಯೆ ನಡೆದ ಕೆಲ ಬೆಳವಣಿಗೆಗಳಿಂದ ಈ ಆದೇಶ ಮೂಲೆಗೆ ಸೇರಿದೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.