ADVERTISEMENT

ಬಳ್ಳಾರಿಯಲ್ಲಿಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಪ್ರತಿನಿಧಿ

ಹರಿಶಂಕರ್ ಜಿ.
Published 1 ಡಿಸೆಂಬರ್ 2025, 4:16 IST
Last Updated 1 ಡಿಸೆಂಬರ್ 2025, 4:16 IST
ಶ್ರೀಶೈಲ ಅಲದಹಳ್ಳಿ 
ಶ್ರೀಶೈಲ ಅಲದಹಳ್ಳಿ    

ಬಳ್ಳಾರಿ: ಜನರ ದೂರು, ಮನವಿಗಳನ್ನು ಆಲಿಸಲು ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಇದೆ, ವಿಶೇಷಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಆದರೆ, ಬಳ್ಳಾರಿಯಲ್ಲಿ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರೂ ಇಲ್ಲ, ಕಚೇರಿಯೂ ಇಲ್ಲ ಎಂಬಂತಾಗಿದೆ. 

ಹೀಗಾಗಿ ಜಿಲ್ಲೆಯಲ್ಲಿ ಸಾರ್ವಜನಿಕರು ತಮ್ಮ ದೂರು ದುಮ್ಮಾನಗಳನ್ನು ಜಿಲ್ಲಾಡಳಿತ, ಅಧಿಕಾರಿಗಳ ಮುಂದೆ ಮಾತ್ರವೇ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.  

ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತವೇ ಆಯಾ ಜಿಲ್ಲೆಗಳಲ್ಲಿ ಸಚಿವರ ಕಚೇರಿ ವ್ಯವಸ್ಥೆ ಮಾಡುತ್ತದೆ. ಅದೇ ರೀತಿ, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರು ಸಚಿವರಾಗಿದ್ದಾಗ ಹೊಸ ಜಿಲ್ಲಾಡಳಿತ ಭವನದಲ್ಲಿ ಕಚೇರಿಯನ್ನು ಕೊಡಲಾಗಿತ್ತು. ನಾಗೇಂದ್ರ ಮಂತ್ರಿ ಸ್ಥಾನದಿಂದ ಇಳಿದ ಬಳಿಕ ಅದು ಈಗ ತೆರವಾಗಿದೆ. ಹೊಸ ಜಿಲ್ಲಾಡಳಿತ ಭವನದಲ್ಲಿ ಈಗ ಸಚಿವರಿಗಾಗಿ ಕಚೇರಿಯೇ ಇಲ್ಲ ಎಂಬಂತಾಗಿದೆ.  

ADVERTISEMENT

ಜಿಲ್ಲೆಯನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ರೈತರು ಎರಡನೇ ಬೆಳೆಗೆ ನೀರು ಕೇಳುತ್ತಿದ್ದಾರೆ. ಇದಕ್ಕಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಮೆಕ್ಕೆ ಜೋಳದ ಖರೀದಿ ಕೇಂದ್ರ ಆರಂಭವಾಗಿಲ್ಲ. ಮೂಲಸೌಕರ್ಯಗಳ ಸಮಸ್ಯೆ ಇದೆ. ಪಾಲಿಕೆ ವ್ಯಾಪ್ತಿಯಲ್ಲೂ ವಿಭಿನ್ನ ಸಮಸ್ಯೆಗಳಿವೆ. ಇಲಾಖೆ ಹಂತದಲ್ಲಿ ಆಗದ ಕೆಲಸಗಳು ಸಚಿವರ ಮಟ್ಟದಲ್ಲಿ ಆಗುವ ವಿಶ್ವಾಸವನ್ನು ಜನ ಹೊಂದಿರುತ್ತಾರೆ. ಆದರೆ, ಮನವಿ ಆಲಿಕೆಗೆ ಇಲ್ಲೊಂದು ವ್ಯವಸ್ಥೆಯೇ ಇಲ್ಲ ಎಂಬುದು ಜನರ ಕೊರಗು.   

ಹೀಗಾಗಿ ಅಧಿಕಾರ ವಿಕೇಂದ್ರೀಕರಣ ಎಂಬುದು ಮರೀಚಿಕೆಯಾಗಿದೆ. ಸರ್ಕಾರದ ಪ್ರತಿನಿಧಿಯೊಬ್ಬರು ಇಲ್ಲಿಲ್ಲ ಎಂಬಂತಾಗಿದೆ. 

ಭರವಸೆ ಮರೆತ ಸಚಿವ: ಸೆ. 29ರಂದು ಬಳ್ಳಾರಿಯಲ್ಲಿ ಜನಸ್ಪಂದನಾ ಮತ್ತು ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆದಿತ್ತು. ಇದರಲ್ಲಿ ಭಾಗವಹಿಸಲೆಂದು ಬಳ್ಳಾರಿಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರನ್ನು ಮಾಧ್ಯಮ ಪ್ರತಿನಿಧಿಗಳು ಜನರ ಅನುಕೂಲಕ್ಕಾಗಿ ಕಚೇರಿಯೊಂದನ್ನು ಆರಂಭಿಸುವಂತೆ ಒತ್ತಾಯಿಸಿದ್ದರು. 

ಈ ಪ್ರಶ್ನೆ ಎದುರಾಗುತ್ತಲೇ ಅವಕ್ಕಾದ ಸಚಿವ ಜಮೀರ್‌ ಅಹಮದ್‌ ಖಾನ್‌, ‘ಜಿಲ್ಲೆಯಲ್ಲಿ ಕಚೇರಿ ಇರಬೇಕಲ್ಲವೇ, ಕಾರ್ಯನಿರ್ವಹಿಸುತ್ತಿದೆಯಲ್ಲವೇ’ ಎಂದು ಮರು ಪ್ರಶ್ನೆ ಹಾಕಿದರು. ಜಿಲ್ಲಾ ಕೇಂದ್ರದಲ್ಲಿ ಸಚಿವರ ಕಚೇರಿಯೇ ಇಲ್ಲ ಎಂಬ ವಿಷಯವನ್ನು ಸ್ಪಷ್ಟವಾಗಿ ಪತ್ರಕರ್ತರು ಮನವರಿಕೆ ಮಾಡಿದ್ದರು. 

ಹಿಂದೆ ನಾಗೇಂದ್ರ ಸಚಿವರಾಗಿದ್ದಾಗ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಸಚಿವರ ಕಚೇರಿ ಇತ್ತು. ಸದ್ಯ ಹಂಪಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ವೆಂಕಟಗಿರಿ ದಳವಾಯಿ ಅವರನ್ನು ನಿಯೋಜನೆ ಮೇರೆಗೆ ವಿಶೇಷಾಧಿಕಾರಿಯಾಗಿ ಮಾಡಿ ಇಲ್ಲಿ ಇರಿಸಲಾಗಿತ್ತು. ಜನರ ದೂರು ದುಮ್ಮಾನಗಳನ್ನು ವಿಶೇಷಾಧಿಕಾರಿ ಸಮರ್ಥವಾಗಿ ಆಲಿಸುತ್ತಿದ್ದರು ಎಂಬ ಸಂಗತಿಯನ್ನು ಅವರ ಗಮನಕ್ಕೆ ಪತ್ರಕರ್ತರು ತಂದರು. 

ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಜಮೀರ್‌, ಕೂಡಲೇ ಕಚೇರಿ ಆರಂಭಿಸಲಾಗುವುದು. ವಾರಕ್ಕೆ ಒಮ್ಮೆಯಾದರೂ ತಮ್ಮ ವಿಶೇಷಾಧಿಕಾರಿಯನ್ನು ಬಳ್ಳಾರಿ ಕಚೇರಿಗೆ ಕಳುಹಿಸುವುದಾಗಿ ಭರವಸೆ ನೀಡಿದರು. ಆದರೆ ಅದ್ಯಾವುದೂ ಆಗಿಲ್ಲ. 

ಅಂದು ಸಚಿವರ ಪಕ್ಕದಲ್ಲೇ ಇದ್ದ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಆರಂಭಿಸಲು ಸಚಿವರಿಗೆ ಮನವಿ ಮಾಡಲಾಗುವುದು, ಹಿಂದೆ ತಮಗೆ ವಿಶೇಷಾಧಿಕಾರಿಯಾಗಿದ್ದ ದಳವಾಯಿ ಅವರನ್ನೇ ನಿಯೋಜನೆ ಮಾಡಲಾಗುವುದು ಎಂದೂ ಹೇಳಿದ್ದರು. ನಾಗೇಂದ್ರ ಅವರೂ ಈ ವಾಗ್ದಾನ ಮರೆತಂತೆ ಕಾಣುತ್ತಿದೆ. 

‘ಈದ್‌ ಕಾ ಚಾಂದ್‌’ ಆದ ಜಮೀರ್‌ 

ಉಸ್ತುವಾರಿ ಸಚಿವ ‘ಈದ್‌ ಕಾ ಚಾಂದ್‌’ ಆಗಿದ್ದಾರೆ. ಅತಿಥಿ ಸಚಿವ ಎಂಬಂತಾಗಿದೆ. ಹೀಗಾಗಿ ಅಧಿಕಾರಿಗಳಿಗೆ ಅವರದ್ಧೇ ಆಟ. ಜನರಿಗೆ ಸಂಕಟ. ಸಚಿವರ ಪ್ರತಿನಿಧಿ ಕಾರ್ಯದರ್ಶಿಯಾದರೂ ಇಲ್ಲಿ ಇರಬೇಕಿತ್ತು. ಸರ್ಕಾರ ಸಾಧ್ಯವಾದರೆ ಸಚಿವರನ್ನು ಬದಲಾಯಿಸಬೇಕು. ಎಲ್ಲರೂ ಅವರನ್ನು ಕಾಣಲೆಂದು ಬೆಂಗಳೂರಿಗೆ ಹೋಗುತ್ತಿದ್ದಾರೆ. ಬಂದವರಿಗೆ ಕೈತುಂಬ ಹಣ ಕೊಟ್ಟರಾಯಿತೇ. ಸಮಸ್ಯೆಗಳನ್ನು ಕೇಳುವುದು ಬೇಡವೇ? 

– ಶ್ರೀಶೈಲ ಆಲದಹಳ್ಳಿ ಸಂಡೂರು 

ಕಚೇರಿ ಶೀಘ್ರ ಆರಂಭವಾಗಲಿದೆ

ಇತ್ತೀಚೆಗೆ ಕೆಡಿಪಿ ಸಭೆ ನಡೆದಿತ್ತು. ಆಗ ಕಚೇರಿ ಆರಂಭಿಸುವ ಬಗ್ಗೆ ಶಾಸಕರೂ ಚರ್ಚೆ ಮಾಡಿದ್ದರು. ಅದರಂತೆ ಜಿಲ್ಲಾ ಕೇಂದ್ರದಲ್ಲಿ ಉಸ್ತುವಾರಿ ಸಚಿವರ ಕಚೇರಿ ಆರಂಭಿಸುವ ಬಗ್ಗೆ ಮತ್ತು ವಿಶೇಷಾಧಿಕಾರಿಯನ್ನು ನಿಯೋಜಿಸುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಶೀಘ್ರದಲ್ಲೇ ಇದೆಲ್ಲವೂ ಆಗಲಿವೆ.  

– ಅಲ್ಲಂ ಪ್ರಶಾಂತ್‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಳ್ಳಾರಿ 

ನಾಗೇಂದ್ರಗಾಗಿ ನಿರೀಕ್ಷೆ

ಎರಡು ತಿಂಗಳ ಹಿಂದೆ ಇನ್ನೇನು ನಾಗೇಂದ್ರ ಅವರೇ ಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಸಚಿವರಾಗಿ ಬರಲಿರುವ ನಾಗೇಂದ್ರ ತಮ್ಮದೇ ಕಚೇರಿಯನ್ನು ಆರಂಭಿಸಲಿದ್ದಾರೆ ಎಂಬಂಥ ವಾತಾವರಣವಿತ್ತು. ಹೀಗಾಗಿ ಕಚೇರಿ ಆರಂಭಿಸುವುದನ್ನು ಮುಂದೂಡಿಕೊಂಡೇ ಬರಲಾಗಿತ್ತು. ಆದರೆ ಈಗ ವಿಳಂಬವಾಗುತ್ತಿದೆ. ಕಚೇರಿ ಮತ್ತು ವಿಶೇಷಾಧಿಕಾರಿ ನಿಯೋಜನೆ ಬಗ್ಗೆ ನಾಗೇಂದ್ರ ಸಚಿವ ಜಮೀರ್‌ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.