ADVERTISEMENT

ಬಳ್ಳಾರಿ | ಖಬರಸ್ತಾನ ಕಬಳಿಕೆ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:00 IST
Last Updated 17 ಫೆಬ್ರುವರಿ 2026, 2:00 IST
ಶ್ರೀನಿವಾಸ್‌ ಮೋತ್ಕರ್‌
ಶ್ರೀನಿವಾಸ್‌ ಮೋತ್ಕರ್‌   

ಬಳ್ಳಾರಿ: ‘ಬೆಂಗಳೂರ ರಸ್ತೆಯಲ್ಲಿರುವ 11.5 ಎಕರೆ ಖಬರಸ್ತಾನದ ಮಾಲೀಕತ್ವವನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದ್ದು, ಪಾಲಿಕೆಯಿಂದ ಫಾರಂ–2 ಮಂಜೂರು ಮಾಡಲಾಗಿದೆ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಶ್ರೀನಿವಾಸ್‌ ಮೋತ್ಕರ್‌ ಆರೋಪಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಪಾಲಿಕೆಯ 3ನೇ ವಲಯದ ಕಂದಾಯ ಅಧಿಕಾರಿಗಳು ಫಾರಂ –2 ನೀಡಿದ್ದಾರೆ. ಇದಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಆಸ್ತಿಯ ಕುರಿತ ಮಾಹಿತಿ, ಖಾತೆ ವರ್ಗಾವಣೆ ಸೇರಿದಂತೆ ಎಲ್ಲ ಮಾಹಿತಿಗಳನ್ನು ದಾಖಲೆಯಲ್ಲಿ ಖಾಲಿ ತೋರಿಸಲಾಗಿದೆ’ ಎಂದು ಅವರು ಹೇಳಿದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ, ಪೌರಾಡಳಿತ ಸಚಿವರು ಈ ಬಗ್ಗೆ ಗಮನಹರಿಸಬೇಕು. ಪಾಲಿಕೆಗೆ ಕರ್ನಾಟಕ ಮುನ್ಸಿಪಲ್‌ ಕಾಯ್ದೆ ಗೊತ್ತಿರುವ ಅಧಿಕಾರಿಗಳನ್ನು ಹಾಕಬೇಕು. ಕಂದಾಯ ಇಲಾಖೆ ಅಧಿಕಾರಿಗಳನ್ನು ಹಾಕಿದರೆ ಇಂಥ ಅಕ್ರಮಗಳು ನಡೆಯುತ್ತವೆ’ ಎಂದು ಶ್ರೀನಿವಾಸ್‌ ಆಗ್ರಹಿಸಿದರು. 

ADVERTISEMENT

‘ಖಬರಸ್ತಾನ ಭೂಮಿ ಅಕ್ರಮ ಪರಾಭಾರೆಯ ಕುರಿತು ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಕಾನೂನು ಹೋರಾಟ ಆರಂಭಿಸಲಾಗುವುದು’ ಎಂದು ಅವರು ಇದೇ ವೇಳೆ ಹೇಳಿದರು.

‘ಪಾಲಿಕೆಯಲ್ಲಿ ಅಕ್ರಮವಾಗಿ ವರ್ಗಾವಣೆಗಳು ನಡೆದಿವೆ. ಸಾಮಾನ್ಯ ಸಭೆ ಕರೆಯುವಲ್ಲಿಯೂ ಯಡವಟ್ಟು ಮಾಡಲಾಗಿದೆ. ಪಾಲಿಕೆಯ ಅಧಿಕಾರಿಗಳಿಗೆ ಕಾರ್ಪೊರೇಟರ್‌ಗಳು, ಸ್ಥಾಯಿ ಸಮಿತಿ ಅಧ್ಯಕ್ಷರು ಯಾರು ಎಂಬುದೇ ಗೊತ್ತಿಲ್ಲ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯರಾದ ಹನುಮಂತ, ಸುರೇಖಾ ಮಲ್ಲನಗೌಡ ಇದ್ದರು.

ಪಾಲಿಕೆ ಬಜೆಟ್‌ ಸಾಮಾನ್ಯ ಸಭೆ ಮುಂದೂಡಿಕೆ ಆಕ್ಷೇಪಗಳ ನಡುವೆ ಸೋಮವಾರ ನಿಗದಿಯಾಗಿದ್ದ ಪಾಲಿಕೆ ಬಜೆಟ್‌ ಮತ್ತು ಸಾಮಾನ್ಯ ಸಭೆಯನ್ನು ಫೆ. 23ಕ್ಕೆ ಮುಂದೂಡಲಾಗಿದೆ. ಬಜೆಟ್‌ಗೆ ಇನ್ನೇನು ಕೆಲವೇ ಗಂಟೆಗಳಿರುವಾಗ ಕೌನ್ಸಿಲ್ ಕಾರ್ಯದರ್ಶಿ ಈ ಕುರಿತ ಪತ್ರ ಹೊರಡಿಸಿದರು. ಮೇಯರ್‌ ಪಿ. ಗಾದೆಪ್ಪ ಅವರ ನಡೆಗೆ ಸ್ವಪಕ್ಷೀಯ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ‘ಮೇಯರ್‌ ಗಾದೆಪ್ಪ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ’ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.