ADVERTISEMENT

ಬಳ್ಳಾರಿ: ಹೊಸ ಡಿ.ಸಿಗೆ ಜಿಲ್ಲೆಯೇ ಸವಾಲು

ಕೆಎಎಸ್‌ನಿಂದ ಬಡ್ತಿ ಪಡೆದ 2015ನೇ ಬ್ಯಾಚ್‌ ಐಎಎಸ್‌ ಅಧಿಕಾರಿ ನಾಗೇಂದ್ರ ಪ್ರಸಾದ್‌ ಕೆ.

ಆರ್. ಹರಿಶಂಕರ್
Published 11 ಸೆಪ್ಟೆಂಬರ್ 2025, 5:14 IST
Last Updated 11 ಸೆಪ್ಟೆಂಬರ್ 2025, 5:14 IST
ನಾಗೇಂದ್ರ ಪ್ರಸಾದ್‌ ಕೆ. 
ನಾಗೇಂದ್ರ ಪ್ರಸಾದ್‌ ಕೆ.    

ಬಳ್ಳಾರಿ: ಐಎಎಸ್‌ ಮಾಡಿದವರೇ ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಬರಬೇಕು ಎಂಬ ವಾದಗಳ ನಡುವೆಯೇ, ಕೆಎಎಸ್‌ನಿಂದ ಬಡ್ತಿ ಪಡೆದ 2015ನೇ ಬ್ಯಾಚ್‌ ಐಎಎಸ್‌ ಅಧಿಕಾರಿ ನಾಗೇಂದ್ರ ಪ್ರಸಾದ್‌ ಕೆ. ಅವರನ್ನು ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ. 

ಕಾನೂನಿನ ಗೆರೆ ಹಾಕಿಕೊಂಡು ಕೆಲಸ ಮಾಡುತ್ತಿದ್ದ ಹಿಂದಿನ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರನ್ನು ಇಲ್ಲಿಂದ ಎಬ್ಬಿಸಿ ಕಳುಹಿಸಬೇಕು ಎಂದು ಒಂದು ಗುಂಪು ಕೆಲಸ ಮಾಡುತ್ತಲೇ ಇತ್ತು. ಅವರನ್ನು ಉಳಿಸಿಕೊಳ್ಳಲೇಬೇಕು ಎಂದು ಮತ್ತೊಂದು ಗುಂಪು ಕೆಲಸ ಮಾಡುತ್ತಿತ್ತು. ಕಡೆಗೆ ಆಯ್ಕೆಯ ಅಧಿಕಾರವನ್ನು ಮುಖ್ಯಮಂತ್ರಿಗೆ ಬಿಡಲಾಗಿತ್ತು. ಸಿಎಂ ಕಚೇರಿಯು ಎಲ್ಲರಿಗೂ ಸಮ್ಮತವಾದ ಅಧಿಕಾರಿಯನ್ನು ನೇಮಿಸಿ ಕಳುಹಿಸಿರುವುದಾಗಿ ಗೊತ್ತಾಗಿದೆ. ಇದರೊಂದಿಗೆ ಹೊಸ ಜಿಲ್ಲಾಧಿಕಾರಿ ನೇಮಕದ ಚರ್ಚೆಗಳು ಕೊನೆಗೊಂಡಿವೆ. ಈಗ ಹೊಸ ಜಿಲ್ಲಾಧಿಕಾರಿಗೆ ಜಿಲ್ಲೆಯಲ್ಲಿ ಇರುವ ಸವಾಲುಗಳ ಚರ್ಚೆಗಳು ಮುನ್ನಲೆಗೆ ಬಂದಿವೆ.  

ವಿಭಜನೆಯ ಬಳಿಕ ಚಿಕ್ಕ ಜಿಲ್ಲೆಯಂಥಾದರೂ, ಹಲವು ಕಾರಣಗಳಿಂದಾಗಿ ಬಳ್ಳಾರಿಯು ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದ ಜಿಲ್ಲೆ. ಬ್ರಿಟಿಷ್‌ ಆಡಳಿತದ ಅವಧಿಯಲ್ಲೇ ಸ್ವತಂತ್ರ ಜಿಲ್ಲೆಯಾಗಿದ್ದ ಬಳ್ಳಾರಿಯಲ್ಲಿ ಗಡಿ ವಿಷಯಗಳಿವೆ. ಜಿಲ್ಲೆಯ ಒಡಲಿನಲ್ಲಿ ಭಾರಿ ಗಣಿಗಾರಿಕೆಗಳು ನಡೆಯುತ್ತಿವೆ, ಭಾರೀ ಉದ್ದಿಮೆಗಳಿವೆ, ರಾಜಕೀಯವಾಗಿಯೂ ಘಟಾನುಗಳಿಗೆ ಆಶ್ರಯ ನೀಡಿದೆ. 

ADVERTISEMENT

ಇದರ ಜತೆಗೆ, ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)ಕ್ಕೆ ಬಳ್ಳಾರಿ ಜಿಲ್ಲೆ ಕೊಡುಗೆ ಅಪಾರ. ಇಲ್ಲಿನ ಅನುದಾನ ಬಯಸಿ, ಬಳ್ಳಾರಿ ಜಿಲ್ಲೆಯ ನೂರಾರು ಪ್ರಸ್ತಾವನೆಗಳು ಈಗಾಗಲೇ ಸಲ್ಲಿಕೆಯಾಗಿವೆ. ಜತೆಗೆ, ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನಲ್ಲಿ ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲೂ ಇಲ್ಲದಷ್ಟು ಹಣ ಬಳ್ಳಾರಿಯಲ್ಲಿದೆ. ಬಳ್ಳಾರಿ ಜಿಲ್ಲೆಯ ಡಿಎಂಎಫ್‌ ಹಣದಲ್ಲಿ ಒಂದಷ್ಟು ಪಾಲನ್ನು ವಿಜಯನಗರ ಜಿಲ್ಲೆಗೂ ನೀಡಬೇಕೆಂಬ ವಿವಾದವೂ ಇದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹಣವೂ ಇಲ್ಲಿಗೆ ಲಭ್ಯವಿದೆ. 

ಇದೆಲ್ಲವನ್ನೂ ಕಾನೂನಾತ್ಮಕ ಹಾದಿಯಲ್ಲಿ ನಿಭಾಯಿಸಬೇಕಿದ್ದರೆ, ಐಎಎಸ್‌ ಕೇಡರ್‌ನ ಅಧಿಕಾರಿಗಳೇ ಆಗಬೇಕು ಎಂಬ ವಾದಗಳಿದ್ದವು. ಎಲ್ಲವನ್ನೂ ಅಳೆದು ತೂಗಿ ಸರ್ಕಾರ ನಾಗೇಂದ್ರ ಪ್ರಸಾದ್‌ ಕೆ. ಅವರನ್ನು ನೇಮಿಸಿದೆ.

ಜಿಲ್ಲೆ ಎಷ್ಟು ಸಂಪದ್ಭರಿತವೋ ಅಷ್ಟೇ ಸಮಸ್ಯೆಗಳಿಂದಲೂ ಕೂಡಿದೆ. ಇಲ್ಲಿ ಹಲವಾರು ವರ್ಷಗಳಿಂದ ಬಾಕಿ ಉಳಿದ ಕಾಮಗಾರಿಗಳಿವೆ. ಕೆಲವು ಕಾಮಗಾರಿಗಳು ಟೆಂಡರ್‌ ಇಲ್ಲದೇ ನಡೆಯುತ್ತಿವೆ. ಅಕ್ಕಿ, ಇಸ್ಪೀಟ್‌, ಮಟ್ಕಾ ಸೇರಿದಂತೆ ಹಲವಾರು ದಂಧೆಗಳು ನಡೆಯುತ್ತಿವೆ. ಇದರಲ್ಲಿ ಪ್ರಭಾವಿಗಳ ಕೈವಾಡವಿರುವುದು ಬಹಿರಂಗ ಸತ್ಯ. ಮರಳು ದಂಧೆ ಇದೆ. ಮುರ್ರಂ ಅಕ್ರಮ ಗಣಿಗಾರಿಕೆ ಇದೆ. ಒಂದಷ್ಟು ಸಮಸ್ಯೆಗಳನ್ನು ಹಿಂದಿನ ಜಿಲ್ಲಾಧಿಕಾರಿ ನೋಡಿಯೂ ಸುಮ್ಮನಿದ್ದರು ಎಂಬ ಅಸಮಾಧಾನಗಳಿವೆಯೇ ಹೊರತು, ಕಾನೂನಿನ ಪರಿಧಿ ದಾಟಿ ಸಮ್ಮತಿ ಕೊಟ್ಟ ಅಪವಾದಗಳಿಲ್ಲ. ಪ್ರಮುಖವಾಗಿ ಜಿಲ್ಲೆಯ ರಾಜಕೀಯ ಮುಖಂಡರ ಹುಕುಂಗಳಿಗೆ ಹುಜೂರ್‌ ಎಂದ ಉದಾಹರಣೆಗಳು ಇಲ್ಲ. ಡಿಎಂಎಫ್‌ ಹಣವನ್ನು ಎಲ್ಲ ತಾಲ್ಲೂಕುಗಳಿಗೆ ಸಮನಾಗಿ ಹಂಚಬೇಕು ಎಂಬ ವಾದಗಳಿಗೆ ಅವರು ಸೊಪ್ಪು ಹಾಕಿಲ್ಲ. 

ಈ ಎಲ್ಲ ಕಾರಣಗಳಿಗಾಗಿ ಹೊಸ ಜಿಲ್ಲಾಧಿಕಾರಿಗೆ ಇಡೀ ಜಿಲ್ಲೆಯೇ ಸವಾಲಿನದ್ದಾಗಿದೆ. ಪ್ರಮುಖವಾಗಿ ಇಲ್ಲಿನ ರಾಜಕೀಯದ ಒತ್ತಡವನ್ನು ತಾಳಿಕೊಂಡು ಹೇಗೆ ಕೆಲಸ ಮಾಡಬಲ್ಲರು ಎಂಬ ಪ್ರಶ್ನೆಗಳು ಉದ್ಭವಿಸಿವೆ. 

ಪ್ರಶಾಂತ್‌ ಕುಮಾರ್‌ ಮಿಶ್ರಾ
ಗಣಿ, ಗಡಿ, ಕೆಎಂಇಆರ್‌ಸಿ, ಡಿಎಂಎಫ್‌ಗಳನ್ನು ಒಳಗೊಂಡಿರುವ ಬಳ್ಳಾರಿ ಜಿಲ್ಲೆ   ರಾಜಕೀಯ ಪ್ರಭಾವ, ಒತ್ತಡಗಳನ್ನು ಎದುರಿಸಬೇಕಾದ ಅನಿವಾರ್ಯತೆ  ಎಲ್ಲರನ್ನು, ಎಲ್ಲವನ್ನೂ ಸರಿದೂಗಿಸಿಕೊಂಡು, ದಕ್ಷವಾಗಿ ಕಾರ್ಯನಿರ್ವಹಿಸುವುದೇ ಸವಾಲು 

ನಾಗೇಂದ್ರ ಪ್ರಸಾದ್‌ ಅಧಿಕಾರ ಸ್ವೀಕಾರ 

ಜಿಲ್ಲಾಧಿಕಾರಿಯಾಗಿ ಹೊಸದಾಗಿ ನಿಯೋಜನೆಗೊಂಡಿರುವ ನಾಗೇಂದ್ರ ಪ್ರಸಾದ್‌ ಕೆ. ಅವರು ಬುಧವಾರ ಸಂಜೆ ಅಧಿಕಾರ ವಹಿಸಿಕೊಂಡರು. ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್‌ ಝುಬೇರ ಅವರು ನಾಗೇಂದ್ರ ಪ್ರಸಾದ್‌ ಅವರನ್ನು ಅಭಿನಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.