ADVERTISEMENT

ಬಳ್ಳಾರಿ: ಹಳೇ ಅದಿರು ಮಾರಲು ತರಾತುರಿ

ಹರಾಜು, ಮಾರಾಟ ಆದೇಶ ನೀಡಿ ಈಗ ಅನುಮತಿಗೆ ಹಿಮ್ಮುಖ ಪ್ರಕ್ರಿಯೆ

ಆರ್. ಹರಿಶಂಕರ್
Published 29 ಜುಲೈ 2025, 3:12 IST
Last Updated 29 ಜುಲೈ 2025, 3:12 IST
ಸಂಡೂರಿನ ಗಣಿಯೊಂದರ ಪ್ರಾತಿನಿಧಿಕ ಚಿತ್ರ 
ಸಂಡೂರಿನ ಗಣಿಯೊಂದರ ಪ್ರಾತಿನಿಧಿಕ ಚಿತ್ರ    

ಬಳ್ಳಾರಿ: ಸಂಡೂರು ತಾಲೂಕಿನ ‘ಸಿ’ ವರ್ಗದ ನಾಲ್ಕು ಗಣಿ ಗುತ್ತಿಗೆಗಳಲ್ಲಿ ಉಳಿದಿರುವ ದಶಕಗಳ ಹಿಂದಿನ ಕಬ್ಬಿಣದ ಅದಿರಿನ ದಾಸ್ತಾನನ್ನು ಹರಾಜು ಹಾಕಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಾನೂನು ಕ್ರಮಗಳನ್ನು ಅನುಸರಿಸದೇ ಇರುವುದು, ಅರಣ್ಯ ಇಲಾಖೆ ಅನುಮತಿಗೆ ತರಾತುರಿ ಮಾಡುತ್ತಿರುವುದು ಬಯಲಾಗಿದೆ.

2011ರ ಅಕ್ರಮ ಗಣಿಗಾರಿಕೆ ಕಾಲದ ಒಟ್ಟು 9 ಲಕ್ಷ ಟನ್‌ಗೂ ಅಧಿಕ ಪ್ರಮಾಣದ ಹಳೇ ಅದಿರನ್ನು ಗಣಿ ಇಲಾಖೆ 2024ರಲ್ಲಿ ನಾಲ್ಕು ಕಂಪನಿಗಳಿಗೆ ಹರಾಜು ಹಾಕಿದೆ. ಒಂದು ಟನ್‌ ಅದಿರಿಗೆ ಕನಿಷ್ಠ ₹3,500 ಎಂಬಂತೆ ಲೆಕ್ಕ ಹಾಕಿದರೂ, ಅದಿರಿನ ಒಟ್ಟು ಬೆಲೆ ₹336 ಕೋಟಿಯಾಗಲಿದೆ. 

ಅಕ್ರಮ ಗಣಿಗಾರಿಕೆ ಬಂದ್‌ ಆದ ಬಳಿಕ ಈ ಅದಿರನ್ನು ಹರಾಜು ಹಾಕಲು 2011ರಿಂದಲೂ ಪ್ರಯತ್ನಗಳು ನಡೆಯುತ್ತಿದ್ದವು. ಈ ವಿಚಾರ ಸುಪ್ರೀಂ ಕೋರ್ಟ್‌ವರೆಗೆ ಹೋಗಿದ್ದು, ಇಂಥ ಅದಿರನ್ನು ಹರಾಜು ಹಾಕಲು ಹಲವು ನಿಬಂಧನೆಗಳನ್ನು ಕೋರ್ಟ್‌ ವಿಧಿಸಿದೆ.

ADVERTISEMENT

ಗಣಿಗಳ ಡಂಪಿಂಗ್‌ ಪ್ರದೇಶಗಳಲ್ಲಿ ಸಂಗ್ರಹಿಸಿರುವ ಈ ಅದಿರು ಒಂದು ವೇಳೆ ಸ್ಥಿರವಾಗಿದ್ದು, ಕಾಡು ಬೆಳೆದುಕೊಂಡಿದ್ದರೆ ಹರಾಜು ಪ್ರಕ್ರಿಯೆಗೆ ಒಳಪಡಿಸಬಾರದು ಎಂಬ ನಿಯಮವಿದೆ. ಅದೂ ಅಲ್ಲದೇ ಸುಪ್ರೀಂ ಕೋರ್ಟ್‌ ನೇಮಿಸಿರುವ ಮೇಲುಸ್ತುವಾರಿ ಸಮಿತಿ ನೇತೃತ್ವದಲ್ಲೇ ಹರಾಜು ನಡೆಯಬೇಕು ಎಂಬ ಸೂಚನೆಯೂ ಇದೆ. ಆದರೆ, ಇದ್ಯಾವ ಅಂಶಗಳನ್ನೂ ಪರಿಶೀಲಿಸದೇ ಹರಾಜು ಹಾಕಲಾಗಿದೆ ಎಂಬ ಆರೋಪಗಳಿವೆ.  

ಹಿಮ್ಮುಖ ಪ್ರಕ್ರಿಯೆ: ಅದಿರನ್ನು ಹರಾಜು ಹಾಕುವುದಕ್ಕೂ ಮೊದಲು ಅರಣ್ಯ ಇಲಾಖೆ ಅಭಿಪ್ರಾಯ ಮತ್ತು ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಬೇಕಿದ್ದ ಗಣಿ ಇಲಾಖೆ ಈಗ ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಆರಂಭಿಸಿದೆ. ಗಣಿ ಇಲಾಖೆ ಹಿಮ್ಮುಖ ಪ್ರಕ್ರಿಯೆ ಆರಂಭಿಸಿದೆ ಎಂಬ ಅಭಿಪ್ರಾಯ ಅಧಿಕಾರಿಗಳಿಂದ ಕೇಳಿ ಬಂದಿದೆ.

ಗಣಿ ಇಲಾಖೆಯ ಮನವಿ ಮೇರೆಗೆ ಇತ್ತೀಚೆಗೆ ಬಳ್ಳಾರಿ ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವರದಿ ಕೇಳಿದ್ದಾರೆ. 

ಈ ಅದಿರು ದಾಸ್ತಾನಿನ ಮೇಲೆ ಗಿಡ ಮರಗಳು ಬೆಳೆದಿವೆಯೇ, ಅರಣ್ಯ ವ್ಯಾಪಿಸಿದ್ದರೆ ಎಷ್ಟು ಮರಗಳು ಇವೆ, ದಾಸ್ತಾನಿಗೆ ಸಂಬಂದಿಸಿದಂತೆ ಆರ್ ಆ್ಯಂಡ್‌ ಆರ್‌ (ಪುನಶ್ಚೇತನ ಮತ್ತು ಪುನರ್ವಸತಿ) ಯೋಜನೆ ಆಗಿದೆಯೇ ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ. 

ಬಳ್ಳಾರಿ ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದು, ಅದಿರು ದಾಸ್ತಾನು ಇರುವ ಕಡೆಗಳಲ್ಲೆಲ್ಲ ಅರಣ್ಯ ವ್ಯಾಪಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಗಿರೀಶ್‌ ಅವರ ಅಭಿಪ್ರಾಯ ಪಡೆಯಲು ಪ್ರಯತ್ನಿಸಲಾಯಿತಾದರೂ, ಅವರ ಸಂಪರ್ಕ ಸಾಧ್ಯವಾಗಲಿಲ್ಲ. ಇಲಾಖೆಯ ಬಳ್ಳಾರಿ ಉಪ ನಿರ್ದೇಶಕಿ ದ್ವಿತೀಯಾ, ಇದು ಕೇಂದ್ರ ಕಚೇರಿಯ ತೀರ್ಮಾನ ಎಂದಷ್ಟೇ ತಿಳಿಸಿದರು.  

ಹಳೇ ಅದಿರಿಗೆ ಸಂಬಂಧಿಸಿದಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವರದಿ ಕೇಳಿದ್ದರು. ವರದಿ ಸಲ್ಲಿಕೆಯಾಗಿದೆ. ವರದಿ ಮತ್ತು ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ.
ಬಸವರಾಜ್‌. ಡಿಸಿಎಫ್‌ ಬಳ್ಳಾರಿ

ಜನಸಂಗ್ರಾಮ ಪರಿಷತ್‌ ಪತ್ರ

ಈ ಹಳೇ ಅದಿರು ದಾಸ್ತಾನು ತೆಗೆಯಲು ಜನಸಂಗ್ರಾಮ ಪರಿಷತ್‌ ಆಕ್ಷೇಪಿಸಿದೆ. ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಸಿಇಸಿಯ ಅಭಿಪ್ರಾಯಗಳನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿ ಅರಣ್ಯ ಸಚಿವ ಮುಖ್ಯ ಕಾರ್ಯದರ್ಶಿಗೆ ರವಾನಿಸಿದೆ.  ಈಗಾಗಲೇ ನಿರ್ದಿಷ್ಟ ಪ್ರದೇಶದಲ್ಲಿ ಸ್ಥಿರವಾಗಿ ಅರಣ್ಯ ಬೆಳೆದುಕೊಂಡಿರುವ ಈ ದಾಸ್ತಾನನ್ನು ತೆಗೆಯುವುದರಿಂದ ಪರಿಸರ ವನ್ಯಜೀವಿ ಜಲಮೂಲಗಳಿಗೆ ಹಾನಿಯಾಗಲಿದೆ. ಮಣ್ಣಿನ ಸವಕಳಿಗೆ ಕಾರಣವಾಗುತ್ತದೆ. ಹರಾಜನ್ನು ರದ್ದುಗೊಳಿಸಬೇಕು. ಮಾರಾಟ ಮಾಡಲು ಗಣಿ ಇಲಾಖೆ ನೀಡಿರುವ ಆದೇಶವನ್ನೂ ಹಿಂಪಡೆಯಬೇಕು. ಇಲ್ಲಾವಾದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.