ಕುರುಗೋಡು: ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಬೇಕಾದರೆ ಸಂವಿಧಾನದ ಆಶಯಗಳಂತೆ ಕಾರ್ಯಾಂಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಬಿ.ಆರ್. ಪಾಟೀಲ್ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮತ್ತು ಕಾನೂನು ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸಂಸತ್, ವಿಧಾನಸಭೆ ಮತ್ತು ವಿಧಾನಪರಿಷತ್ ಅಧಿವೇಶನಗಳು ಕನಿಷ್ಠ 100 ದಿನಗಳಾದರೂ ನಡೆಯಬೇಕು. ಜನಪ್ರತಿನಿಧಿಗಳು ಪಕ್ಷಬೇಧ ಮರೆತು ರಾಜ್ಯದಲ್ಲಿನ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆಗಳು ನಡೆದು ಪರಿಹಾರ ಕಂಡುಕೊಳ್ಳಬೇಕು. ಬದಲಾದ ಪರಿಸ್ಥಿತಿಯಲ್ಲಿ ಅಧಿವೇಶನಗಳು ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ನಡುವಿನ ಪರ ವಿರೋಧ ಆರೋಪ ಪ್ರತ್ಯಾರೋಗಳಿಗೆ ವೇದಿಕೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು,
ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಗ್ರಾಮಸಭೆಗಳ ಪರಿಸ್ಥಿತಿ ಹೊರತಾಗಿಲ್ಲ. ಪ್ರಭಾವಿಗಳು ಮತ್ತು ಉಳ್ಳವರು ಸರ್ಕಾರದ ಯೋಜನೆಗಳ ಫಲಾನುಭವಿಗಳಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಕಣ್ಮರೆಯಾಗುತ್ತಿದೆ. ಮೂಲಭೂತ ಚರ್ಚೆಗಳಾಗುತ್ತಿಲ್ಲ. ದುಡ್ಡು ಇದ್ದವರು ಅಧಿಕಾರದಲ್ಲಿ ಮರೆಯುತ್ತಿದ್ದಾರೆ. ಪ್ರಾಮಾಣಿಕ ವ್ಯಕ್ತಿಗಳು ಮೂಲೆಗುಂಪಾಗುತ್ತಿದ್ದಾರೆ ಎಂದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನ ತುಂಬಾ ಪವಿತ್ರವಾದುದು. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರು ದೇಶದ ಆಸ್ತಿ ಎಂದರು.
ಕರ್ನಾಟಕ ರಾಜಕೀಯ ಅಕಾಡೆಮಿ ಗೌರವಾಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಮಾತನಾಡಿದರು.
ರೈತ ಸಂಘದ ಮುಖಂಡ ಮಾಧವರೆಡ್ಡಿ ಮತ್ತು ಹೂಗಾರ್ ಬಸವರಾಜ್, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.