ಹೂವಿನಹಡಗಲಿ: ಪ್ರತಿ ಟನ್ ಕಬ್ಬಿನ ಬೆಲೆಯನ್ನು ಕಟಾವು, ಸಾಗಣೆ ವೆಚ್ಚ ಹೊರತಾಗಿ ನಿವ್ವಳ ₹3,100 ನಿಗದಿಪಡಿಸಬೇಕು ಎಂದು ಕಬ್ಬು ಬೆಳೆಗಾರರು ಪಟ್ಟು ಹಿಡಿದಿದ್ದರಿಂದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಕರೆಯಲಾಗಿದ್ದ ರೈತರು, ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಸಭೆಯಲ್ಲಿ ಒಮ್ಮತ ಮೂಡಲಿಲ್ಲ.
ಗಂಗಾಪುರ ವಿಜಯನಗರ ಶುಗರ್ಸ್ ನ ವ್ಯವಸ್ಥಾಪಕ ಬಾಲರೆಡ್ಡಿ, ಸಹಾಯಕ ವ್ಯವಸ್ಥಾಪಕ ದೇವೀರಪ್ಪ, ಮೈಲಾರ ಶುಗರ್ಸ್ ನ ರಾಜಕುಮಾರ್ ಅವರು ಮಾತನಾಡಿ, ಸರ್ಕಾರ ನಿಗದಿಪಡಿಸಿರುವ ನ್ಯಾಯೋಚಿತ ಬೆಂಬಲ ಬೆಲೆ (ಏಫ್ಆರ್ ಪಿ) ಕಟಾವು, ಸಾಗಣೆ ವೆಚ್ಚ ಒಳಗೊಂಡು 3291 ರೂ. ನೀಡಲು ಆಡಳಿತ ಮಂಡಳಿಗಳು ಒಪ್ಪಿವೆ ಎಂದು ತಿಳಿಸಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬೆನ್ನೂರು ಹಾಲೇಶಪ್ಪ, ರವಿನಾಯ್ಕ, ಮುಜುಬು ರಹಿಮಾನ್, ರೈತರಾದ ಬಸವರಾಜ ಇತರರು ಆಕ್ಷೇಪಿಸಿ, ಬೀಜ ಗೊಬ್ಬರ ಬೆಲೆ, ಕೂಲಿ ವೆಚ್ಚ ದುಪ್ಪಟ್ಟಾಗಿವೆ. ಕಟಾವು, ಸಾಗಣೆ ವೆಚ್ಚ ಹೊರತಾಗಿ ಪ್ರತಿಟನ್ ಕಬ್ಬಿಗೆ 3,100 ರೂ. ನೀಡಬೇಕು ಎಂದು ಒತ್ತಾಯಿಸಿದರು.
‘ಕಾರ್ಖಾನೆಯವರು ಕಟಾವು, ಸಾಗಣೆ ವೆಚ್ಚ ಬಿಲ್ ನಲ್ಲಿ ಕಡಿತಗೊಳಿಸುತ್ತಿದ್ದರೂ ಕಾರ್ಮಿಕರು ರೈತರಿಂದ ‘ಖುಷಿ’ ಹೆಸರಲ್ಲಿ ಹಣ ವಸೂಲಿ ಮಾಡುತ್ತಾರೆ. ಹಣ ಕೊಡದಿದ್ದರೆ ಗದ್ದೆಗೆ ಇಳಿಯುವುದಿಲ್ಲ. ಸಾಗಣೆಯ ಪ್ರತಿ ಟ್ರ್ಯಾಕ್ಟರ್ ಗೆ 500 ರೂ. ಹೆಚ್ಚುವರಿ ಹಣ ಕೊಡಬೇಕು. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದ್ದು, ಎಫ್ಆರ್ ಪಿ ದರ ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.
‘ರೈತರಿಂದ ಹೆಚ್ಚುವರಿ ಹಣ ಪಡೆಯದಂತೆ ಗ್ಯಾಂಗ್ ಮನ್ ಗಳಿಗೆ, ಕ್ಷೇತ್ರಾಧಿಕಾರಿಗಳಿಗೆ ಸೂಚಿಸಲಾಗಿದೆ. ದರ ಪರಿಷ್ಕರಣೆ ಅಧಿಕಾರ ನಮಗಿಲ್ಲ, ಆಡಳಿತ ಮಂಡಳಿಗಳು ತೀರ್ಮಾನಿಸಬೇಕು’ ಎಂದು ಕಾರ್ಖಾನೆ ಅಧಿಕಾರಿಗಳು ಹೇಳಿದಾಗ ‘ದರ ಪರಿಷ್ಕರಿಸುವವರೆಗೆ ಕಾರ್ಖಾನೆ ಬಂದ್ ಮಾಡಿಸಿ’ ಎಂದು ರೈತರು ಒತ್ತಾಯಿಸಿದರು.
ತಹಶೀಲ್ದಾರ್ ಜಿ. ಸಂತೋಷಕುಮಾರ್ ಪ್ರತಿಕ್ರಿಯಿಸಿ, ರೈತರು ತಮ್ಮ ಬೇಡಿಕೆಯ ಮನವಿ ಸಲ್ಲಿಸಿದರೆ, ಅದರ ಆಧಾರದಲ್ಲಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಆಶ್ರಫ್, ತಾ.ಪಂ. ಸಹಾಯಕ ನಿರ್ದೇಶಕ ಹೇಮಾದ್ರಿನಾಯ್ಕ, ಎಪಿಎಂಸಿ ಕಾರ್ಯದರ್ಶಿ ತಿಮ್ಮಪ್ಪ ನಾಯಕ, ಕೆಆರ್ ಎಸ್ ಪಕ್ಷದ ಅಧ್ಯಕ್ಷ ಡಿ.ಚಂದ್ರಶೇಖರ, ರೈತ ಸಂಘದ ಅಧ್ಯಕ್ಷ ಎಚ್.ಸಿದ್ದಪ್ಪ, ಕಾರ್ಯದರ್ಶಿ ಎಂ.ಶಿವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.