ADVERTISEMENT

ಹಗರಿಬೊಮ್ಮನಹಳ್ಳಿ: ನೌಕರಿ ತೊರೆದು ಕೃಷಿಕಳಾದ ಯುವತಿ

ಸಿ.ಶಿವಾನಂದ
Published 13 ಮೇ 2022, 19:30 IST
Last Updated 13 ಮೇ 2022, 19:30 IST
ದೇಸಿ ತಳಿಯ ಹಸುಗಳೊಂದಿಗೆ ದೀಪ್ತಿ
ದೇಸಿ ತಳಿಯ ಹಸುಗಳೊಂದಿಗೆ ದೀಪ್ತಿ   

ಹಗರಿಬೊಮ್ಮನಹಳ್ಳಿ: ಓದು ಮುಗಿದ ನಂತರ ಮಹಾನಗರಗಳಿಗೆ ತೆರಳಿ, ಕೆಲಸಕ್ಕೆ ಸೇರಿದರೆ ಉದ್ದೇಶ ಈಡೇರಿತು ಎಂಬ ಭಾವನೆ ಹಲವರದು. ಆದರೆ, ತಾಲ್ಲೂಕಿನ ಅಡವಿ ಆನಂದದೇವನಹಳ್ಳಿಯ ದೀಪ್ತಿ ಬಾಲಕೋಟೇಶ್ವರರಾವ್‌ ವೆಲ್ಲಂಕಿ ಇದಕ್ಕೆ ತದ್ವಿರುದ್ಧ.

ಎಂ.ಬಿ.ಎ., ಬಿ.ಇ ಮುಗಿಸಿದ ಅವರು ಅದಕ್ಕೆ ತಕ್ಕುದಾದ ನೌಕರಿ ಸಿಕ್ಕಿದರೂ ಅದನ್ನು ತೊರೆದು ಕೃಷಿಕರಾಗಿದ್ದಾರೆ. ಈಗ ಅವರಿಗೆ 27ರ ಹರೆಯ. ಬದುಕು ಕಟ್ಟಿಕೊಳ್ಳುವ ವಯಸ್ಸು. ತನ್ನೆದುರಿಗೆ ಅನೇಕ ಅವಕಾಶಗಳಿದ್ದರೂ ಅವುಗಳನ್ನು ನಿರ್ಲಕ್ಷಿಸಿ ಕೃಷಿಯಲ್ಲಿ ತೊಡಗಿದ್ದಾರೆ. ಅದು ಕೂಡ ಸಾವಯವ ಕೃಷಿ.

ಆರಂಭದಲ್ಲಿ 20 ಎಕರೆಯಲ್ಲಿ ದಾಳಿಂಬೆ ಬೆಳೆದು ನಷ್ಟ ಅನುಭವಿಸಿದ್ದರು. ಆದರಿಂದ ವಿಚಲಿತರಾಗದೆ, ಬಳಿಕ ನೇರಳೆ, ಪೇರಲ, ಮೋಸಂಬಿ ಬೆಳೆದು ಯಶ ಕಂಡಿದ್ದಾರೆ. 300 ಗಿಡ ನೇರಳೆ , ಸಾವಿರ ಪೇರಲ ಗಿಡ, ಆರು ಎಕರೆಯಲ್ಲಿ ಮೋಸಂಬಿ ಬೆಳೆದಿದ್ದಾರೆ. ಮೂರು ಕೃಷಿ ಹೊಂಡ ನಿರ್ಮಿಸಿ ಅಂತರ್ಜಲ ಹೆಚ್ಚಿಸಿದ್ದಾರೆ. ಅದರಲ್ಲೇ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಜೇನು ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ.

ADVERTISEMENT

ದೇಸಿ ತಳಿಯ 40 ಹಸು, ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಅವರೇ ಗೊಬ್ಬರ ತಯಾರಿಸಿಕೊಳ್ಳುತ್ತಿದ್ದಾರೆ. ಹೀಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಯಶಸ್ಸಿನ ಕಡೆಗೆ ಹೆಜ್ಜೆ ಹಾಕಿದ್ದಾರೆ. ಇವರ ಸಾಧನೆಗೆ ಕಿರೀಟವೆಂಬಂತೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯವು 2021ರಲ್ಲಿ ಶ್ರೇಷ್ಠ ತೋಟಗಾರಿಕೆ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಿದೆ.

‘ಯುವಕರು ಕೃಷಿ ಕಡೆಗೆ ಮುಖಮಾಡಲು ಸರ್ಕಾರ ಪ್ರೋತ್ಸಾಹದಾಯಕ ಯೋಜನೆ ಜಾರಿಗೆ ತರಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ, ಮಾರುಕಟ್ಟೆ ರೂಪಿಸಬೇಕು’ ಎಂದು ದೀಪ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.