ADVERTISEMENT

ಬಳ್ಳಾರಿ | 40 ವರ್ಷಗಳಾದರೂ ಸ್ಥಾಪನೆಯಾಗದ ಬಸ್ ನಿಲ್ದಾಣ: ಬಿಸಿಲಲ್ಲಿ ಪ್ರಯಾಣಿಕರ ಪರದಾಟ

40 ವರ್ಷಗಳಾದರೂ ಸ್ಥಾಪನೆಯಾಗದ ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 28 ಮೇ 2023, 23:30 IST
Last Updated 28 ಮೇ 2023, 23:30 IST
ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದ ರಸ್ತೆಯಲ್ಲೇ ಬಿರುಬಿಸಿಲಿನಲ್ಲಿ ಬಸ್ಸಿಗಾಗಿ ಕಾದು ನಿಂತ ಪ್ರಯಾಣಿಕರು
ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದ ರಸ್ತೆಯಲ್ಲೇ ಬಿರುಬಿಸಿಲಿನಲ್ಲಿ ಬಸ್ಸಿಗಾಗಿ ಕಾದು ನಿಂತ ಪ್ರಯಾಣಿಕರು   

ಎರ್ರಿಸ್ವಾಮಿ.ಬಿ

ತೋರಣಗಲ್ಲು: ಸಮೀಪದ ಕುರೆಕುಪ್ಪ ಪುರಸಭೆಯ ವ್ಯಾಪ್ತಿಗೆ ಒಳಪಡುವ ತೋರಣಗಲ್ಲು ರೈಲ್ವೆ ನಿಲ್ದಾಣದ ಪ್ರದೇಶದಲ್ಲಿ ಸುಮಾರು 40 ವರ್ಷಗಳಿಂದ ನೂತನ ಬಸ್ ನಿಲ್ದಾಣವು ಸ್ಥಾಪನೆಯಾಗದಿರುವುದರಿಂದ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ 63ರ ಬದಿಯಲ್ಲಿ ನಿತ್ಯ ಬಸ್‍ಗಳಿಗಾಗಿ ಕಾಯುವುದು ಸಾಮಾನ್ಯವಾಗಿದೆ.

ತೋರಣಗಲ್ಲು ಗ್ರಾಮ, ಸುತ್ತಲಿನ ಪ್ರದೇಶವು ಜಿಂದಾಲ್ ಸೇರಿದಂತೆ ಇತರ ಸಣ್ಣ ಮತ್ತು ಬೃಹತ್ ಪ್ರಮಾಣದ ಕೈಗಾರಿಕೆಗಳನ್ನು ಹೊಂದಿ, ಆರ್ಥಿಕ ಚಟವಟಿಕೆಯಲ್ಲಿ ಮುಂಚೂಣಿ ಸಾಧಿಸಿ, ರಾಜ್ಯ, ದೇಶದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದೆ. ಆದರೆ ಇಂತಹ ವಾಣಿಜ್ಯ, ವ್ಯವಹಾರಿಕ ತಾಣದಲ್ಲಿ ಪ್ರಯಾಣಿಕರ, ಕಾರ್ಮಿಕರ ಸುರಕ್ಷತೆಗಾಗಿ ಬಸ್ ನಿಲ್ದಾಣದ ಸ್ಥಾಪಿಸದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ADVERTISEMENT

ಪ್ರಸ್ತುತ ದಿನಗಳಲ್ಲಿ ಈ ಸ್ಥಳವು ದೊಡ್ಡ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದಿ, ನಿತ್ಯ ಕೋಟಿಗಟ್ಟಲೇ ಆರ್ಥಿಕ ವ್ಯವಹಾರ ನಡೆಯುವ ವಾಣಿಜ್ಯ ತಾಣವಾಗಿ ಮಾರ್ಪಟ್ಟಿದೆ. ಈ ತಾಣವು ಅತ್ಯಂತ ಜನನೀಬಿಡ ತಾಣವಾಗಿದ್ದು, ನಿತ್ಯ ಸಾವಿರಾರು ಸ್ಥಳೀಯ, ರಾಜ್ಯ, ಹಾಗೂ ಹೊರ ರಾಜ್ಯದ ಕಾರ್ಮಿಕರು, ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ಹತ್ತಿರದ ಸ್ಥಳಗಳಿಗೆ, ಜಿಲ್ಲೆ, ರಾಜ್ಯ, ಹಾಗೂ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರು, ಕಾರ್ಮಿಕರು ಸೂಕ್ತ ಬಸ್ ನಿಲ್ದಾಣವಿಲ್ಲದೆ ಹಲವಾರು ವರ್ಷಗಳಿಂದ ಮಕ್ಕಳು, ಮಹಿಳೆಯರು, ವೃದ್ಧರು, ಕುಟುಂಬಗಳ ಸಮೇತ ಚಳಿ, ಗಾಳಿ, ಬಿಸಿಲು ಮಳೆಯನ್ನದೇ ರಸ್ತೆಯಲ್ಲೇ ಹಗಲಿರುಳು ಬಸ್‍ಗಳಿಗಾಗಿ ಕಾಯುವುದು ನಿತ್ಯದ ಸಾಮಾನ್ಯ ದೃಶ್ಯವಾಗಿದೆ.
 
ಪ್ರತಿ ವರ್ಷ ಸಂಡೂರು ತಾಲ್ಲೂಕಿನಿಂದ ಮೈನಿಂಗ್ ಮತ್ತು ಕೈಗಾರಿಕಾ ಕ್ಷೇತ್ರದಿಂದ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ತೆರಿಗೆ ಸಂದಾಯವಾಗುತ್ತಿದ್ದರೂ ಸ್ಥಳೀಯ ಶಾಸಕರು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತವು ಹಲವಾರು ವರ್ಷಗಳಿಂದ ಈ ಸ್ಥಳದಲ್ಲಿ ಕನಿಷ್ಠ ಸಣ್ಣ ಪ್ರಮಾಣದ ಬಸ್ ನಿಲ್ದಾಣವನ್ನು ಸ್ಥಾಪಿಸಲು ಮುಂದಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವೂ ಆಗಿದೆ.

‘ಜಿಂದಾಲ್ ಕೈಗಾರಿಕೆಯಿಂದ ತೋರಣಗಲ್ಲು ಗ್ರಾಮ, ರೈಲ್ವೇ ನಿಲ್ದಾಣ ಪ್ರದೇಶವು ಅತ್ಯಂತ ಜನಭರಿತ ಪ್ರದೇಶವಾಗಿದ್ದು, ನಿತ್ಯ ಸಾವಿರಾರು ಜನರು ಈ ಸ್ಥಳದಿಂದ ವಿವಿಧ ಸ್ಥಳಗಳಿಗೆ ಪ್ರಯಾಣ ಮಾಡುತ್ತಾರೆ. ಆದರೆ ಸ್ಥಳದ ಸಮಸ್ಯೆಯ ನೆಪದಿಂದ ಜಿಲ್ಲಾಡಳಿತವು ಸುಮಾರು 40 ವರ್ಷಗಳಿಂದ ಬಸ್ ನಿಲ್ದಾಣವನ್ನು ನಿರ್ಮಿಸದೇ ಕಾಲಹರಣ ಮಾಡುವುದು ಸರಿಯಲ್ಲ, ಶೀಘ್ರವಾಗಿ, ಈ ಸ್ಥಳದಲ್ಲಿ ದೊಡ್ಡ ಪ್ರಮಾಣದ ಆಧುನಿಕ ಬಸ್ ನಿಲ್ದಾಣ ನಿರ್ಮಿಸಬೇಕು’ ಎಂದು ಸ್ಥಳೀಯ ನಿವಾಸಿ ಯು.ಅಂಜಿನಪ್ಪ ಒತ್ತಾಯಿಸಿದರು.

‘ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಜಾಗದ ಕೊರತೆ ಇದ್ದು, ಕುರೆಕುಪ್ಪ ಪುರಸಭೆಯವರು ಸ್ಥಳ ನಿಗದಿ ಮಾಡಿ, ನಮ್ಮ ಸಾರಿಗೆ ಇಲಾಖೆಯ ಸುಪರ್ದಿಗೆ ನೀಡಿದರೇ ತ್ವರಿತವಾಗಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು’ ಎಂದು ಬಳ್ಳಾರಿ ಜಿಲ್ಲೆಯ ಸಾರಿಗೆ ವಿಭಾಗೀಯ ಅಧಿಕಾರಿ ದೇವರಾಜ್ ಪ್ರತಿಕ್ರಿಸಿದರು.

‘ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ನೂತನ ಸಾರಿಗೆ ಬಸ್ ನಿಲ್ದಾಣ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು 5 ಎಕರೆಯ ಸರ್ಕಾರದ ಜಾಗವನ್ನು ಗುರುತಿಸಲಾಗಿದೆ. ಶೀಘ್ರವಾಗಿ ಶಾಸಕರ ಬಳಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಕುರೆಕುಪ್ಪ ಪುರಸಭೆ ಮುಖ್ಯಾಧಿಕಾರಿ ಸತೀಶ್‍ಗುಡ್ಡೆ ಹೇಳಿದರು.

ಜಿಂದಾಲ್ ಸೇರಿದಂತೆ ಸಣ್, ಬೃಹತ್ ಪ್ರಮಾಣದ ಕೈಗಾರಿಕೆಗಳುಳ್ಳ ಪ್ರದೇಶ ಬೃಹತ್ ಜಿಂದಾಲ್ ಕಾರ್ಖಾನೆ ಇದ್ದರೂ ವ್ಯರ್ಥ ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.