ಸಂಡೂರು: ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ(ಕೆಎಂಇಆರ್‌ಸಿ)ದಲ್ಲಿ ಸಾವಿರಾರು ಕೋಟಿ ಹಣವಿದ್ದರೂ, ಅದಿರು ಸಾಗಣೆ ವಾಹನಗಳಿಗೆ ಪ್ರತ್ಯೇಕ ಕಾರಿಡಾರ್ ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸುವಲ್ಲಿ ಲೋಕೋಪಯೋಗಿ ಇಲಾಖೆಯು ನಿರ್ಲಕ್ಷ್ಯ ತೋರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲ್ಲೂಕಿನಲ್ಲಿ ಪ್ರತಿ ದಿನ 11 ಸಾವಿರ ಅದಿರು ಲಾರಿಗಳು ಸಂಚರಿಸುತ್ತಿವೆ. ವಾರ್ಷಿಕ ಲಕ್ಷಾಂತರ ಟನ್ ಅದಿರು ಭಾರಿ ಗ್ರಾತದ ಲಾರಿಗಳ ಮೂಲಕ ಸಾಗಣೆ ಆಗುತ್ತಿದೆ. ಸರ್ಕಾರವು ರಸ್ತೆಯ ಜಾಲಕ್ಕೆ ಅನುಗುಣವಾಗಿ ಅದಿರು ಸಾಗಾಣಿಕೆ ಮಿತಿಯನ್ನು ನಿಗದಿಪಡಿಸದೇ ಇರುವುದರಿಂದ ರಸ್ತೆಗಳು ನಿರಂತರವಾಗಿ ಹದಗೆಡುತ್ತಿವೆ, ಅಪಘಾತಗಳು ನಡೆಯುತ್ತಿವೆ.
ಗಣಿಪೀಡಿತ ರಾಮಘಡ, ನಾರಾಯಣಪುರ ಗ್ರಾಮದಿಂದ ಯು.ರಾಜಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಕಮ್ಮತ್ತೂರು(ದೇವಗಿರಿ ಹಳ್ಳಿ) ಗ್ರಾಮದಿಂದ ಸೋಮನಹಳ್ಳಿ, ತೋಣಸಿಗೇರಿ, ನರಸಿಂಗಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಅದಿರು ಲಾರಿಗಳ ಸಂಚಾರದಿಂದ ಹದಗೆಟ್ಟಿವೆ. ಆದರೆ, ರಸ್ತೆಗಳನ್ನು ನಿರ್ಮಿಸದೇ ಲೋಕೋಪಯೋಗಿ ಇಲಾಖೆ ಕಾಲ ಹರಣ ಮಾಡುತ್ತಿದೆ. ಇದರ ಬಗ್ಗೆ ಸಂಡೂರು ಜನರಲ್ಲಿ ಅಸಮಾಧಾನವಿದೆ.
ಸುಶೀಲನಗರ ಗ್ರಾಮದಿಂದ ಪ್ರಾಚೀನ, ರಾಮಘಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಯ ಹಳೆಯ ಕಾಲದ ರಸ್ತೆಯು ಗಣಿ ಕಂಪನಿಗಳ ಅಬ್ಬರಕ್ಕೆ ನಲುಗಿದೆ. ಪ್ರಸ್ತುತ ರಾಮಘಡ ಗ್ರಾಮಸ್ಥರು ಸಿದ್ದಾಪುರ ಗ್ರಾಮದ ಮೂಲಕ ಗಣಿ ಲಾರಿಗಳು ಸಂಚರಿಸುವ ರಸ್ತೆಯನ್ನೇ ಅವಲಂಬಿಸಿದ್ದಾರೆ. ರಾಮಘಡ ಗ್ರಾಮಕ್ಕೆ ನೂತನ ರಸ್ತೆ ಅಭಿವೃದ್ಧಿಗಾಗಿ ಕೆಎಂಇಆರ್‌ಸಿಯಿಂದ ಲೋಕೋಪಯೋಗಿ ಇಲಾಖೆಗೆ ₹79 ಕೋಟಿ ನಿಗದಿಯಾಗಿದ್ದು, ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಂಡೂರು ಕ್ಷೇತ್ರದ ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ.
ಅದಿರು ಲಾರಿಗಳ ನಿರಂತರ ಸಂಚಾರದಿಂದ ರಸ್ತೆಗಳು ಸಂಪೂರ್ಣವಾಗಿ ಗುಂಡಿಗಳಾಗಿ ಮಾರ್ಪಟ್ಟಿವೆ. ಹದಗೆಟ್ಟ ರಸ್ತೆಯಲ್ಲಿ ಲಾರಿಗಳು ಸಂಚರಿಸುವುದರಿಂದ ಹೆಚ್ಚಿನ ಧೂಳು ಆವರಿಸಿ ಕ್ಷಯ, ಉಸಿರಾಟ ತೊಂದರೆ, ಶ್ವಾಸಕೋಶ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.
ಜಮೀನುಗಳಲ್ಲಿನ ಬೆಳೆಗಳಿಗೆ ಕೆಂಪು ಧೂಳು ಆವರಿಸುವುದರಿಂದ ಬೆಳೆಗಳ ಇಳುವರಿಯು ಕುಟಿಂತಗೊಳ್ಳತ್ತಿದೆ. ಎಲ್ಲ ಗಣಿ ಬಾಧಿತ ಗ್ರಾಮಗಳಿಗೆ ಕೆಎಂಇಆರ್‌ಸಿಯ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸಿಸಿ ರಸ್ತೆಗಳನ್ನು ನಿರ್ಮಿಸಬೇಕು ಎಂಬುದು ಎಲ್ಲ ಗ್ರಾಮಸ್ಥರ ಒತ್ತಾಯವಾಗಿದೆ.
ಗಣಿ ಬಾಧಿತ ಗ್ರಾಮಗಳ ರಸ್ತೆಗಳು ಲಾರಿಗಳ ಸಂಚಾರದಿಂದ ಹದಗೆಟ್ಟಿವೆ. ಲೋಕೋಪಯೋಗಿ ಇಲಾಖೆಯು ಪ್ರತ್ಯೇಕ ಅದಿರು ಸಾಗಾಣಿಕೆ ಕಾರಿಡಾರ್ ನಿರ್ಮಿಸಬೇಕುಎನ್.ಎಚ್.ಮಲ್ಲಿಸ್ವಾಮಿ ದೇವಗಿರಿ ಗ್ರಾಮ ಪಂಚಾಯಿತಿ ಸದಸ್ಯ
ಗಣಿ ಬಾಧಿತ ಗ್ರಾಮಗಳಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಸಮೀಕ್ಷೆ ನಡೆಸಿ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜೂನ್ 6ರೊಳಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದುಮಡಗಿನಬಸಪ್ಪ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಡೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.