
ಬಳ್ಳಾರಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಋತುವಿನ ಬಿಳಿ ಜೋಳ ಮಾರಾಟ ಮಾಡಲು ಬಳ್ಳಾರಿ ಜಿಲ್ಲೆಯ ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ನೋಂದಣಿ ಆರಂಭವಾದ ಕೆಲವೇ ದಿನಗಳಲ್ಲಿ 5,863 ರೈತರು ಒಟ್ಟು 3.14 ಲಕ್ಷ ಕ್ವಿಂಟಲ್ ಮಾರಾಟ ಮಾಡಲು ನೋಂದಣಿ ಮಾಡಿಸಿದ್ದಾರೆ.
ಖರೀದಿ ಏಜೆನ್ಸಿಯಾದ ‘ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ(ಕೆಎಫ್‌ಸಿಎಸ್‌ಸಿ)’ ಜಿಲ್ಲೆಯ 18 ಖರೀದಿ ಕೇಂದ್ರಗಳ ಮೂಲಕ ಜ. 14ರಿಂದ ಜೋಳ ನೋಂದಣಿ ಪ್ರಕ್ರಿಯೆ ಆರಂಭಿಸಿತ್ತು. ಪ್ರತಿ ರೈತನಿಂದ ಎಕರೆಗೆ 15 ಕ್ವಿಂಟಾಲ್‌ನಂತೆ, ಗರಿಷ್ಠ 150 ಕ್ವಿಂಟಲ್ ಖರೀದಿ ಮಾಡುವುದಾಗಿ ಸರ್ಕಾರ ಹೇಳಿತ್ತು.
ಬಿಳಿ ಜೋಳ (ಹೈಬ್ರೀಡ್) ₹3,699 (ಪ್ರತಿ ಕ್ವಿಂಟಲ್), ಮಾಲ್ದಂಡಿಗೆ ₹3,749 ಬೆಲೆ ನಿಗದಿ ಮಾಡಲಾಗಿತ್ತು.
ಅದರಂತೆ ಜಿಲ್ಲೆಯಲ್ಲಿ ಜ. 17ರ ವರೆಗೆ ನಡೆದ ನೋಂದಣಿ ಪ್ರಕ್ರಿಯೆಯಲ್ಲಿ ಒಟ್ಟು 5,863 ರೈತರು 314068.50 ಕ್ವಿಂಟಲ್ ಜೋಳ ಮಾರಾಟ ಮಾಡಲು ನೋಂದಾಯಿಸಿದ್ದಾರೆ.
ತಾಳೂರು ಖರೀದಿ ಕೇಂದ್ರದಲ್ಲಿ 746 ರೈತರು, ಕರೂರು 693, ಎಮ್ಮಿಗನೂರು ಕೇಂದ್ರದಲ್ಲಿ 583 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇದು ಜಿಲ್ಲೆಯಲ್ಲೇ ಅತಿಹೆಚ್ಚು. ಚೋರನೂರು ಕೇಂದ್ರದಲ್ಲಿ ಕೇವಲ 3 ರೈತರು 92 ಕ್ವಿಂಟಲ್‌ಗೆ ನೋಂದಣಿ ಮಾಡಿಸಿದ್ದಾರೆ ಎಂಬುದು ಆಹಾರ ಇಲಾಖೆಯ ಮಾಹಿತಿಯಿಂದ ಗೊತ್ತಾಗಿದೆ.
ಜಿಲ್ಲೆಯಲ್ಲಿ 2025–26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 19,630 ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆ ಆಗಿತ್ತು. ಪ್ರತಿ ಹೆಕ್ಟೇರ್‌ಗೆ ಸರಾಸರಿ 15 ಕ್ವಿಂಟಲ್‌ನಂತೆ ಅಂದಾಜು 3 ಲಕ್ಷ ಕ್ವಿಂಟಲ್ ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದಕ್ಕೂ ಮೀರಿದ ಉತ್ಪನ್ನಕ್ಕೆ ಜಿಲ್ಲೆಯಲ್ಲಿ ನೋಂದಣಿಯಾಗಿದೆ. ಇಷ್ಟೇ ಅಲ್ಲ, ಇನ್ನೂ ಹಲವು ರೈತರು ನೋಂದಣಿಗಾಗಿ ಖರೀದಿ ಕೇಂದ್ರಗಳಿಗೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಮುಂಗಾರು ಹಂಗಾಮಿನ ಒಟ್ಟು 3,21,536 ಕ್ವಿಂಟಲ್ ಜೋಳ ಮಾರಾಟ ಮಾಡಲು 5,193 ರೈತರು ನೋಂದಣಿ ಮಾಡಿಕೊಂಡಿದ್ದರು. ಈ ವರ್ಷ ಇಲ್ಲಿಗಾಗಲೇ 3.14 ಲಕ್ಷ ಕ್ವಿಂಟಲ್‌ಗೆ ನೋಂದಣಿಯಾಗಿದೆ. ಹೊಸ ನೋಂದಣಿಗೆ ಈಗ ಅವಕಾಶ ಸಿಕ್ಕರೂ ಇನ್ನೂ 60–70 ಸಾವಿರ ಕ್ವಿಂಟಲ್ ಜೋಳಕ್ಕೆ ರೈತರು ನೋಂದಣಿ ಮಾಡುವ ಸಾಧ್ಯತೆಗಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಗಾರು ಬೆಳೆಯ ಖರೀದಿ ಪ್ರಕ್ರಿಯೆ ಫೆಬ್ರುವರಿಯಲ್ಲಿ ಆರಂಭವಾಗುವ ನಿರೀಕ್ಷೆಗಳಿವೆ ಎನ್ನಲಾಗಿದೆ.
ರಾಜ್ಯದಲ್ಲಿ ಈಗಾಗಲೇ ನಿಗದಿತ ಗುರಿ ತಲುಪಿರುವುದರಿಂದ ಬಿಳಿ ಜೋಳ ನೋಂದಣಿ ಸ್ಥಗಿತಗೊಂಡಿದೆ. ಆದರೂ ಇನ್ನೂ ಸಾಕಷ್ಟು ರೈತರು ಖರೀದಿಗೆ ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಇನ್ನೂ ಹೆಚ್ಚಿನ ಖರೀದಿಗೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎನ್ನಲಾಗಿದೆ. ಅದರಂತೆ ಕೇಂದ್ರವು ಇನ್ನೂ 70–80 ಸಾವಿರ ಟನ್ ಖರೀದಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಾತ್ರವೇ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬೆಳೆಯಲಾಗಿದೆ. ಒಂದು ವೇಳೆ ಹೊಸ ಖರೀದಿಗೆ ಅನುಮತಿ ಸಿಕ್ಕರೆ, ಬಳ್ಳಾರಿಯ ಬಹುತೇಕ ಜೋಳ ನೋಂದಣಿಗೆ ಒಳಪಡುವ ಸಾಧ್ಯತೆಗಳುಂಟು ಎಂದು ಅಧಿಕಾರಿಗಳು ತಿಳಿಸಿದರು.
ಜೋಳ ನೋಂದಣಿ ಮಾಡುವ ನಿರೀಕ್ಷೆಯಲ್ಲಿ ಇನ್ನೂ ಹಲವು ರೈತರು ಇರುವುದನ್ನು ಸರ್ಕಾರ ಗಮನಿಸಿದೆ. ಇದನ್ನು ಕೇಂದ್ರಕ್ಕೆ ತಿಳಿಸಿದೆ. ಇನ್ನೂ ಹೆಚ್ಚಿನ ಪ್ರಮಾಣದ ನೋಂದಣಿಗೆ ಕೇಂದ್ರ ಅವಕಾಶ ನೀಡುವ ಸಾಧ್ಯತೆಗಳಿವೆ.ಸಕೀನಾ ಉಪ ನಿರ್ದೇಶಕಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.