ಬಳ್ಳಾರಿ: ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ಕೂಡಲೇ ನೀರು ಬಿಡುವಂತೆ ಒತ್ತಾಯಿಸಿ ತುಂಗಭದ್ರಾ ರೈತ ಸಂಘವು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಸರ್ಕಾರಕ್ಕೆ ಬರೆದ ಪತ್ರವನ್ನು ಜಿಲ್ಲಾಡಳಿತದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ, ‘ಮುಂಗಾರು ಮಳೆ ಉತ್ತಮವಾಗಿದೆ. ಜಲಾಶಯದಲ್ಲಿ ನೀರು ಶೇಖರಣೆಯಾಗಿದೆ. ಮಲೆನಾಡಿನಾದ್ಯಂತ ಉತ್ತಮ ಮಳೆಯಿಂದಾಗಿ ಜಲಾಶಯಕ್ಕೆೆ ಭಾರಿ ನೀರು ಹರಿದು ಬರುತ್ತಿದೆ. ಆದರೆ, ಕಾಲುವೆಗಳಿಗೆ ನೀರು ಬೀಡಲು ತುಂಗಭದ್ರಾ ಬೋರ್ಡ್ ಅಧಿಕಾರಿಗಳು ತಡ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಾಚೂರು ಜಿಲ್ಲೆೆಗಳ ಕಾಲುವೆಗಳಿಗೆ ನೀರು ಹರಿಸಬೇಕು. ಎರಡು ಬೆಳೆಗಳಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಸಂಘದ ಮುಖಂಡರಾದ ಕುಡಿತಿನಿ ಎ.ಪಂಪಾಪತಿ, ಕೊಂಚಿಗೇರಿ ಮಲ್ಲಪ್ಪ, ಮುಷ್ಟಘಟ್ಟ ಭೀಮನಗೌಡ, ಶಿವಯ್ಯ, ಚನ್ನಪಟ್ಟಣ ಖಾಜಾವಲಿಸಾಬ್ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.