
ಬಳ್ಳಾರಿ: ಅಖಂಡ ಬಳ್ಳಾರಿ, ನೆರೆ ಹೊರೆಯ ಜಿಲ್ಲೆಗಳು, ಹೊರ ರಾಜ್ಯಗಳ ಜನರು ಆರಾಧಿಸುವ ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಾಲಯವು ಬೇಡದ ಕಾರಣಗಳಿಗಾಗಿ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಹೈಕೋರ್ಟ್ ಸೂಚನೆ, ಸರ್ಕಾರದ ವರ್ಗಾವಣೆ ಆದೇಶವಾಗಿದ್ದರೂ, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅಧಿಕಾರ ಹಸ್ತಾಂತರ ಮಾಡುವಲ್ಲಿ ಅನಗತ್ಯ ವಿಳಂಬ ಮಾಡಿರುವುದು ನ್ಯಾಯಾಂಗ ಹೋರಾಟಕ್ಕೆ ಕಾರಣವಾಗಿದೆ.
ಈ ಮಧ್ಯೆ ಕನಕದುರ್ಗಮ್ಮ ದೇವಿ ದೇವಸ್ಥಾನ ಸಂಸ್ಥೆಗೆ ಸಂಬಂಧಿಸಿದ 2022–23ನೇ ಸಾಲಿನ (ಇದೇ ಇತ್ತೀಚಿನದ್ದು) ಲೆಕ್ಕ ಪರಿಶೋಧನಾ ವರದಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಅದರಲ್ಲಿ ದೇವಸ್ಥಾನದ ಆಡಳಿತ ಲೆಕ್ಕ ತಪ್ಪಿರುವುದು ಬಹಿರಂಗವಾಗಿದೆ. ಲೆಕ್ಕಪತ್ರಗಳಲ್ಲಿ ನ್ಯೂನತೆ, ಲೋಪದೋಷಗಳಾಗಿರುವುದು ಕಂಡು ಬಂದಿದೆ. ಇದೆಲ್ಲವೂ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರ ವೈಫಲ್ಯಗಳತ್ತ ಬೊಟ್ಟು ಮಾಡಿವೆ.
2022–23ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಒಟ್ಟು ನಾಲ್ವರು ಲೆಕ್ಕ ಪರಿಶೋಧಕರು 2024ರ ಏ. 6ರಿಂದ ಏ. 20ರ ವರೆಗೆ ತನಿಖೆ ಮಾಡಿ ಸಿದ್ಧಪಡಿಸಿದ್ದರು.
ಹಿಂದಿನ ಲೆಕ್ಕ ತಪಾಸಣಾ ವರದಿಗಳಿಗೆ ಅನುಪಾಲನಾ ವರದಿ ಸಲ್ಲಿಸದೇ ಇರುವುದು, ದೇವಸ್ತಾನದ ನಗದು ಪುಸ್ತಕದ ನಿರ್ವಹಣೆಯಲ್ಲಿ ಲೋಪಗಳಿರುವುದು, ಹೂಡಿಕೆಗಳ ರಿಜಿಸ್ಟರ್ ನಿಗದಿತ ನಮೂನೆಯಲ್ಲಿ ನಿರ್ವಹಿಸದೇ ಇರುವುದು, ಸ್ಥಿರಾಸ್ತಿ ಮತ್ತು ಚರಾಸ್ತಿ ರಿಜಿಸ್ಟರ್ ಲೆಕ್ಕಪರಿಶೋಧನೆಗೆ ಹಾಜರುಪಡಿಸದೇ ಇರುವುದು, ದಾಸಹೋಹದ ದವಸಧಾನ್ಯಗಳ ದಾಸ್ತಾನು ಅಪೂರ್ಣವಾಗಿ ನಿರ್ವಹಿಸಿರುವುದು, ರಸೀದಿ ಪುಸ್ತಳನ್ನು ಖಾಸಗಿ ಮುದ್ರಣಾಲಯದಿಂದ ಪಡೆದಿರುವುದು, ರಸೀದಿ ದಾಸ್ತಾನು ವಹಿಯನ್ನು ನಿರ್ವಹಿಸದಿರುವುದು, ಸ್ವೀಕೃತಿಯಾಗುವ ನಗದು ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ಬ್ಯಾಂಕಿಗೆ ಜಮಾ ಮಾಡದೇ ಇರುವುದು, ದಾಸೋಹಕ್ಕೆ ತರಕಾರಿ ಖರೀದಿಯಲ್ಲಿ ಲೋಪದೋಷಗಳಾಗಿರುವುದು, ನೌಕರರ ವೇತನ ಪುಸ್ತಕವನ್ನು ನಿರ್ವಹಿಸದೇ ಇರುವುದು, ವಸತಿ ಗೃಹಗಳಿಗೆ ಬಂದ ಆದಾಯಕ್ಕೆ ಸಂಬಂಧಿಸಿದ ಕಡತಗಳನ್ನು ಲೆಕ್ಕ ಪರಿಶೋಧನೆಗೆ ನೀಡದೇ ಇರುವುದು ಸೇರಿದಂತೆ ವರದಿಯಲ್ಲಿ ಹಲವು ಬಗೆಯ ನ್ಯೂನತೆಗಳನ್ನು ಪಟ್ಟಿ ಮಾಡಲಾಗಿದೆ.
ದಾಸೋಹಕ್ಕೆ ಕಿರಾಣಿ ಸಾಮಾಗ್ರಿಗಳ ಖರೀದಿ, ಟೆಂಡರ್ ಕರೆಯದೇ ನೇರವಾಗಿ ಸಾಮಾಗ್ರಿ ಖರೀದಿ ಮಾಡಿರುವುದು, ಶಾಮಿಯಾನ–ಚಪ್ಪರ ಪೂರೈಕೆ, ಹೂವಿನ ಅಲಂಕಾರ ಸೇವೆ ಪಡೆದ ಕಡತಗಳಲ್ಲಿನ ದೋಷ, ಸಿಬ್ಬಂದಿ ಮತ್ತು ಅರ್ಚಕರ ಹೆಸರಿನಲ್ಲಿ ಚೆಕ್ ಮುಖಾಂತರ ಹಣ ಪಾವತಿಸಿರುವುದು, ಸರ್ಕಾರದ ಸಾಮಾನ್ಯ ಸಂಗ್ರಹಣಾ ನಿಧಿಗೆ ವಂತಿಗೆ ನೀಡದಿರುವುದೂ ಸೇರಿ ವಿವಿಧ ಲೋಪದೋಷಗಳಲ್ಲಿ ಒಟ್ಟು ₹1,11,52,616ಗೆ ಆಕ್ಷೇಪಣೆ ಎತ್ತಲಾಗಿದೆ.
ಈ ವರೆಗೆ ಒದಗಿಸಿಲ್ಲ ದಾಖಲೆ
ಕನಕ ದುರ್ಗಮ್ಮ ದೇವಸ್ಥಾನ ಸಂಸ್ಥೆಯ 2022-23ನೇ ಸಾಲಿನ ಲೆಕ್ಕತನಿಖಾ ವರದಿಯ ಒಟ್ಟು 9 ಕಂಡಿಕೆಗಳಿಗೆ ಅನುಪಾಲನಾ ವರದಿಯನ್ನು ತಯಾರಿಸಿ ರಾಜ್ಯ ಲೆಕ್ಕ ಪತ್ರ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ ದೇಗುಲ ಸಂಸ್ಥೆ ಸಲ್ಲಿಸಿತ್ತು. ಅನುಪಾಲನಾ ವರದಿಯ ಪರಿಶೀಲನೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಇಲಾಖೆ ಸೂಚಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ದಾಖಲೆಗಳನ್ನು ಕಾರ್ಯನಿರ್ವಹಾಕ ಅಧಿಕಾರಿ ಸಲ್ಲಿಸಿಲ್ಲ ಎಂಬುದು ಬಹಿರಂಗವಾಗಿದೆ. ಲೆಕ್ಕ ಪತ್ರ ಇಲಾಖೆ ಜಂಟಿ ನಿರ್ದೇಶಕರು ನ. 11ರಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಬರೆದ ಪತ್ರದಿಂದ ಈ ವಿಷಯ ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಇಲಾಖೆಯ ಸಹಾಯಕ ಆಯುಕ್ತರನ್ನು ಹಲವು ಬಾರಿ ಸಂಪರ್ಕಿಸಿದರೂ ಅವರು ಸಿಗಲಿಲ್ಲ.
ಅಧಿಕಾರ ಹಸ್ತಾಂತರ ಮಾಡುವಂತೆ ಹೈಕೋರ್ಟ್ ತಾಕೀತು
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಹೊಸ ಅಧಿಕಾರಿ ನೇಮಿಸಲು ನ. 11ರಂದು ಆದೇಶಿಸಿತ್ತು. ನ. 24ರಂದು ಅಧಿಕೃತ ಜ್ಞಾನಪನಾ ಪತ್ರ ಹೊರಡಿಸಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಟಿ. ಸೆಲ್ವಮಣಿ ಅವರನ್ನು ಹೊಸ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಿಯೋಜಿಸಿತ್ತು.
ಆದರೆ, ಹೊಸ ಅಧಿಕಾರಿಗೆ ಈ ವರೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಆಗಿಲ್ಲ. ಈ ವಿಷಯ ಕೋರ್ಟ್ ಮೆಟ್ಟಿಲೇರಿದ್ದು, ಹೊಸ ಅಧಿಕಾರಿಗೆ ಅಧಿಕಾರ ಕೊಡುವಂತೆ ಹನುಮಂತಪ್ಪ ಅವರಿಗೆ ಹೈಕೋಟ್ ತಾಕೀತು ಮಾಡಿದೆ. ಇಲ್ಲವಾದರೆ, ಕ್ರಮ ಜರಗಿಸುವುದಾಗಿ ಎಚ್ಚರಿಸಿದೆ. ಕೋರ್ಟ್ ಆದೇಶದಂತೆ ಬುಧವಾರವೇ ಹೊಸ ಅಧಿಕಾರಿಗೆ ಅಧಿಕಾರ ಕೊಡಬೇಕಿತ್ತು. ಆದರೆ, ಅಧಿಕಾರ ಹಸ್ತಾಂತರ ಇನ್ನೂ ಆಗಿಲ್ಲ ಎನ್ನಲಾಗಿದೆ. ಈ ಕುರಿತ ಮಾಹಿತಿಗಾಗಿ ಹನುಮಂತಪ್ಪ ಅವರನ್ನು ಸಂಪರ್ಕಿಸಿದರೆ ಅವರ ಸಂಪರ್ಕವೂ ಸಾಧ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.