ಬಳ್ಳಾರಿ: ‘ಆಗಸ್ಟ್ 16ರಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಒಳಮೀಸಲಾತಿ ಜಾರಿಗೆ ತರದಿದ್ದರೆ, ರಾಜ್ಯದಲ್ಲಿ ಮಾದಿಗರು ದಂಗೆ ಏಳಲಿದ್ದಾರೆ’ ಎಂದು ಕರ್ನಾಟಕ ಮಾದಿಗ ಮತ್ತು ಉಪ ಜಾತಿ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಂಘದ ರಾಜ್ಯ ಘಟಕದ ಪ್ರಧಾನ ಸಂಚಾಲಕ ಹನುಮಂತಪ್ಪ, ‘ಆ.11ರಿಂದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಅಸಹಕಾರ ಚಳವಳಿ ಆರಂಭಿಸುತ್ತೇವೆ. ಆಂಧ್ರ ಪ್ರದೇಶದ ಮಂದಕೃಷ್ಣ ಮಾದಿಗ ಅವರೂ ಬರಲಿದ್ದು, ಹೋರಾಟ ತೀವ್ರಗೊಳ್ಳಲಿದೆ’ ಎಂದು ತಿಳಿಸಿದರು.
‘35 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಮಾದಿಗರಿಗೆ ಶೇ 6ರಷ್ಟು ಮೀಸಲಾತಿ ನೀಡಿ. ಇತರರನ್ನು ಒಟ್ಟುಗೂಡಿಸಿ ಉಳಿದ ಶೇ 11ರಷ್ಟು ಮೀಸಲಾತಿ ಪಡೆದುಕೊಳ್ಳಲು ತಿಳಿಸಬೇಕು’ ಎಂದು ಆಗ್ರಹಿಸಿದರು.
‘ಕಾಂಗ್ರೆಸ್ ಪಕ್ಷವು 2013 ಮತ್ತು 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿ ಕುರಿತು ಭರವಸೆ ನೀಡಿತ್ತು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಬಳಿಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು. ಅವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ’ ಎಂದರು.
‘ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಮಹದೇವಪ್ಪ ಅವರು ಒಳಮೀಸಲಾತಿ ಬಗ್ಗೆ ಒಳಗೊಂದು ಹೊರಗೊಂದು ಮಾತಾಡುತ್ತಾರೆ. ನ್ಯಾ. ನಾಗಮೋಹನದಾಸ್ ವರದಿ ಸಲ್ಲಿಕೆ ಬಳಿಕವೂ ಹಲವು ವಿದ್ಯಮಾನಗಳು ಸರ್ಕಾರದಲ್ಲಿ ನಡೆದಿವೆ. ವಿರೋಧಿಗಳ ಷಡ್ಯಂತ್ರಕ್ಕೆ ಸಿದ್ದರಾಮಯ್ಯ ತಲೆಬಾಗಿದ್ದಾರೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಪಕ್ಷ ಸದಾಶಿವ ಆಯೋಗದ ವರದಿ ಮೂಲೆಗೆ ಸರಿಸಿತು, ಮಧುಸ್ವಾಮಿ ಆಯೋಗದ ವರದಿ ತಳ್ಳಿಹಾಕಿತು. ದಲಿತ ಪರ ಎನ್ನುವ ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು’ ಎಂದರು.
ಮುಖಂಡರಾದ ಎ.ಕೆ. ಹುಲುಗಪ್ಪ, ಸೋಮಶೇಖರ್, ತಿಪ್ಪೇಸ್ವಾಮಿ, ರುದ್ರಪ್ಪ, ವಸಂತಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.