ADVERTISEMENT

ಅನುಮಾನಾಸ್ಪದ ಸಾವು, ಡೆತ್‌ ನೋಟ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 20:00 IST
Last Updated 4 ಡಿಸೆಂಬರ್ 2019, 20:00 IST
ಮಾರೆಣ್ಣನವರು ಸಾವನ್ನಪ್ಪಿದ ಹೊಸಪೇಟೆಯ ಟಿ.ಬಿ. ಡ್ಯಾಂ ರಸ್ತೆಯ ಪಾಳುಬಿದ್ದ ಕಟ್ಟಡದ ಬಳಿ ವಿಷಯ ಗೊತ್ತಾಗಿ ಜನ ಸೇರಿದ್ದರು
ಮಾರೆಣ್ಣನವರು ಸಾವನ್ನಪ್ಪಿದ ಹೊಸಪೇಟೆಯ ಟಿ.ಬಿ. ಡ್ಯಾಂ ರಸ್ತೆಯ ಪಾಳುಬಿದ್ದ ಕಟ್ಟಡದ ಬಳಿ ವಿಷಯ ಗೊತ್ತಾಗಿ ಜನ ಸೇರಿದ್ದರು   

ಹೊಸಪೇಟೆ: ಸಿರುಗುಪ್ಪ ಪುರಸಭೆಯಲ್ಲಿ ಬಿಲ್‌ ಕಲೆಕ್ಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಾರೆಣ್ಣ (54) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಬುಧವಾರ ಸಾವನ್ನಪ್ಪಿದ್ದಾರೆ.

ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಅವರ ಶವ ಟಿ.ಬಿ. ಡ್ಯಾಂ ರಸ್ತೆಯ ಪಾಳು ಕಟ್ಟಡದ ಬಳಿ ಪತ್ತೆಯಾಗಿದೆ. ಅವರ ಶವದ ಬಳಿ ಡೆತ್‌ ನೋಟ್‌ ಸಿಕ್ಕಿದೆ.

‘ಮೂರು ತಿಂಗಳ ಹಿಂದೆ ನನ್ನ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ಅಧಿಕಾರಿಗಳು ದಾಳಿ ನಡೆಸಿದ್ದರು. ನಾನು ಹಣ ಪಡೆದುಕೊಂಡಿದ್ದೆ ಎಂದು ಆರೋಪಿಸಿದ್ದರು. ಅದರಿಂದ ಮನನೊಂದು ಜೀವ ತ್ಯಜಿಸಿದ್ದೇನೆ’ ಎಂದು ಅದರಲ್ಲಿ ಬರೆದುಕೊಂಡಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮಾರೆಣ್ಣ ಈ ಹಿಂದೆ ಹೊಸಪೇಟೆ ನಗರಸಭೆಯಲ್ಲಿ ಬಿಲ್‌ ಕಲೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದರು. ಹಣದೊಂದಿಗೆ ಅವರನ್ನು ಎ.ಸಿ.ಬಿ. ಅಧಿಕಾರಿಗಳು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದರು. ಬಳಿಕ ಅವರು ಸಿರುಗುಪ್ಪ ಪುರಸಭೆಗೆ ವರ್ಗಾವಣೆಗೊಂಡಿದ್ದರು.

ವಿಷಯ ತಿಳಿದು ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಮಾರಣ್ಣನವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಬೇರೆ ಯಾರಾದರೂ ಮಾಡಿದ್ದಾರೋ ಎಂಬುದು ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಲಿದೆ’ ಎಂದು ಡಿ.ವೈ.ಎಸ್ಪಿ. ವಿ. ರಘುಕುಮಾರ ತಿಳಿಸಿದರು.

ವಿಷಯ ಗೊತ್ತಾಗಿ ಅವರ ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಸುತ್ತಮುತ್ತಲಿನ ಅನೇಕ ಜನ ಅಲ್ಲಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.