ಬಳ್ಳಾರಿ: ಹಕ್ಕಿ ಜ್ವರವು ಬ್ರಾಯ್ಲರ್ ಕೋಳಿಗಳಿಗೆ ಬಾಧಿಸುತ್ತಿದೆ ಹೊರತು ಮೊಟ್ಟೆ ಇಡುವ ಕೋಳಿಗಳಿಗೆ ಅಲ್ಲ. ಆದರೆ, ದುಷ್ಪರಿಣಾಮ ಬೀರಬಹುದು ಎಂಬ ಭೀತಿಯಿಂದ ಮೊಟ್ಟೆ ಉದ್ಯಮಕ್ಕೆ ಪೆಟ್ಟು ಬಿದ್ದಿದೆ.
ಕುಕ್ಕುಟೋದ್ಯಮದಲ್ಲಿ ಮಾಂಸದ ಉದ್ದೇಶದ ಮತ್ತು ಮೊಟ್ಟೆ ಉದ್ದೇಶದ ಎರಡು ಬಗೆಯ ಕೋಳಿಗಳನ್ನು ಪ್ರತ್ಯೇಕ ಸಾಕಲಾಗುತ್ತದೆ. ಮೊಟ್ಟೆ ಉದ್ದೇಶದ ಕೋಳಿಗಳ ಜೀವಿತಾವಧಿ ಎರಡು ವರ್ಷ. ಈ ಅವಧಿಯಲ್ಲಿ 350–400 ಮೊಟ್ಟೆ ಇಡುತ್ತವೆ. ಈ ಕೋಳಿಗಳನ್ನು ಅತ್ಯಂತ ಜೋಪಾನವಾಗಿ ಮತ್ತು ಔಷಧೋಪಚಾರಗಳೊಂದಿಗೆ ನೋಡಿಕೊಳ್ಳಲಾಗುತ್ತದೆ. ಈ ಮೊಟ್ಟೆ ಕೋಳಿಗಳಿಗೆ ರೋಗ ಕಡಿಮೆ.
ಮಾಂಸ ಉದ್ದೇಶದ ಬ್ರಾಯ್ಲರ್ ಕೋಳಿಗಳ ಜೀವಿತಾವಧಿ 38 ರಿಂದ 40 ದಿನ. ಅವುಗಳಿಗೆ ಹೆಚ್ಚು ಔಷಧೋಪಚಾರ, ಸುರಕ್ಷತಾ ಕ್ರಮ ಇರುವುದಿಲ್ಲ. ಅವು ಬೇಗನೇ ರೋಗಗಳಿಗೆ ತುತ್ತಾಗುತ್ತವೆ.
ಬಳ್ಳಾರಿಯ ಕಪ್ಪಗಲ್‌ನಲ್ಲಿ ಸಾವಿಗೀಡಾಗಿದ್ದು ಎಲ್ಲವೂ ಬ್ರಾಯ್ಲರ್ ಕೋಳಿಗಳು. ಅದೇ ಬಳ್ಳಾರಿ ಹೊರವಲಯದ ಕಣೇಕಲ್ ರಸ್ತೆ ಬಳಿ 95 ಸಾವಿರ ಮೊಟ್ಟೆ ಕೋಳಿಗಳಿರುವ ಫಾರಂನಲ್ಲಿ ಹಕ್ಕಿಜ್ವರ ಪ್ರಕರಣ ಕಂಡು ಬಂದಿಲ್ಲ.
ಹಕ್ಕಿ ಜ್ವರದ ಭೀತಿಯಿಂದ ಮೊಟ್ಟೆ ದರ ಕುಸಿದಿದೆ. ಮೊಟ್ಟೆ ಬೆಲೆ ಎರಡೇ ತಿಂಗಳಲ್ಲಿ ₹ 2ರಷ್ಟು ಕಡಿಮೆಯಾಗಿದೆ. ಕಳೆದ ಡಿಸೆಂಬರ್‌ನಲ್ಲಿ ₹5.80 ಇದ್ದ ಮೊಟ್ಟೆ ದರ ಈಗ ₹3.80ಕ್ಕೆ ಇಳಿದಿದೆ’ ಎಂದು ಕೋಳಿ ಫಾರಂ ಮಾಲೀಕರಾದ ಸುಮನ್ ಮತ್ತು ಶ್ರೀಧರ್ ತಿಳಿಸಿದರು.
‘ದೇಶದಲ್ಲಿ 2002ರಲ್ಲಿ ಹಕ್ಕಿ ಜ್ವರ ಮೊದಲ ಬಾರಿಗೆ ಕಾಣಿಸಿಕೊಂಡಿತು. ಅಲ್ಲಿಂದ ಈವರೆಗೆ ಮೂರರಿಂದ ನಾಲ್ಕು ಬಾರಿ ಮಾತ್ರ ತೀವ್ರ ಸ್ವರೂಪದ ಸಮಸ್ಯೆಯಾಗಿದೆ. ಪ್ರತಿ ವರ್ಷ ಈ ಸಮಸ್ಯೆ ಕಾಣಿಸುತ್ತಾದರೂ ತೀವ್ರತೆ ಕಡಿಮೆ ಇರುತ್ತದೆ. ಈ ವರ್ಷ ತೀವ್ರತೆ ಅಧಿಕವಾಗಿದೆ’ ಎಂದು ಕುಕ್ಕುಟೋದ್ಯಮಿಗಳು ತಿಳಿಸಿದರು.
‘ಈ 23 ವರ್ಷಗಳಲ್ಲಿ ಮಾನವನಿಗೆ ಹಕ್ಕಿ ಜ್ವರದ ಸೋಂಕು ತಗುಲಿರುವ ಒಂದು ಪ್ರಕರಣ ವರದಿಯಾಗಿಲ್ಲ. ಹಾಗಾದರೆ, ಈ ಗೊಂದಲ, ಆತಂಕ ಏಕೆ’ ಎಂದು ಕೋಳಿ ಫಾರಂಗಳ ಮಾಲೀಕರು ಪ್ರಶ್ನಿಸಿದರು.
ಮೊಟ್ಟೆ ಕೋಳಿ ಉದ್ಯಮವು ಮಾಂಸದ ಕೋಳಿ ಉದ್ಯಮಕ್ಕಿಂತ ದೊಡ್ಡದು. ಅಲ್ಲಿ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತದೆ. ಹಕ್ಕಿಜ್ವರ ಮೊಟ್ಟೆ ಕೋಳಿಗಳಲ್ಲಿ ಈವರೆಗೆ ಕಾಣಿಸಿಲ್ಲ.– ಹನುಮಂತ ನಾಯ್ಕ ಕಾರಬಾರಿ ಉಪ ನಿರ್ದೇಶಕ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬಳ್ಳಾರಿ
ಹಕ್ಕಿಜ್ವರಕ್ಕೆ ತುತ್ತಾದ ಕೋಳಿ ಒಂದೂವರೆ ದಿನದಲ್ಲಿ ಸಾಯುತ್ತದೆ. ಅಂಗಡಿಗೆ ಬರುವವರೆಗೆ ಅವು ಇರುವುದಿಲ್ಲ. ಮಾಂಸದ ಅಂಗಡಿಯಲ್ಲಿ ಕೋಳಿ ಕಾಣಿಸಿಕೊಂಡಿದೆ ಎಂದರೆ ಅವು ಆರೋಗ್ಯಯುತ ಕೋಳಿ. ಜನ ಆತಂಕಪಡಬೇಕಿಲ್ಲ– ಸುಮನ್ ಕೋಳಿ ಫಾರಂ ಮಾಲೀಕ
ಬಳ್ಳಾರಿಯಿಂದ ಮೃತ ಕೋಳಿಗಳ ಮಾದರಿಗಳನ್ನು ಹೊತ್ತು ಪಶುಪಾಲನಾ ಇಲಾಖೆ ಸಿಬ್ಬಂದಿಯೇ ಭೋಪಾಲ್‌ನ ‘ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆ’ಗೆ ತೆರಳಿದ್ದರೂ ಈವರೆಗೆ ಪರೀಕ್ಷಾ ವರದಿ ಸಿಕ್ಕಿಲ್ಲ. ‘ದೇಶದ ವಿವಿಧೆಡೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಮಾದರಿಗಳು ಬಂದಿದ್ದು ಬಳ್ಳಾರಿ ಮಾದರಿಯನ್ನು ಪರೀಕ್ಷಿಸುವುದು ವಿಳಂಬವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.