ADVERTISEMENT

ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 13:24 IST
Last Updated 6 ಜನವರಿ 2019, 13:24 IST
ಬಿಜೆಪಿ ಕಾರ್ಯಕರ್ತರು ಭಾನುವಾರ ಹೊಸಪೇಟೆಯ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ಬಿಜೆಪಿ ಕಾರ್ಯಕರ್ತರು ಭಾನುವಾರ ಹೊಸಪೇಟೆಯ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಮೋಹನ್‌ ಅವರು ಲಕ್ಷಾಂತರ ರೂಪಾಯಿಯೊಂದಿಗೆ ಸಿಕ್ಕಿಬಿದ್ದಿದ್ದು, ಈ ಪ್ರಕರಣವನ್ನು ಸಿ.ಬಿ.ಐ.ಗೆ ಒಪ್ಪಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರು ಭಾನುವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ನಗರದ ರೋಟರಿ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಪುಟ್ಟರಂಗಶೆಟ್ಟಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿ.ಬಿ.ಐ. ತನಿಖೆಗೆ ಆಗ್ರಹಿಸಿದರು. ತೈಲ ಬೆಲೆ ಏರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು.

‘ಸಚಿವರ ಆಪ್ತ ಸಹಾಯಕ ಲಕ್ಷಾಂತರ ರೂಪಾಯಿ ನೋಟುಗಳೊಂದಿಗೆ ವಿಧಾನಸೌಧದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಇದನ್ನು ರಾಜ್ಯ ಸರ್ಕಾರ ಮರೆಮಾಚಲು ಯತ್ನಿಸುತ್ತಿದೆ. ಈ ಪ್ರಕರಣ ಸಿ.ಬಿ.ಐ.ಗೆ ವಹಿಸಿದರೆ ಸತ್ಯಾಂಶ ಹೊರಬರುತ್ತದೆ. ರಾಜ್ಯ ಸರ್ಕಾರ ತನಿಖೆಗೆ ಒಪ್ಪಿಸದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಬಿಜೆಪಿ ಮುಖಂಡ ಅಶೋಕ ಜೀರೆ ಎಚ್ಚರಿಕೆ ನೀಡಿದರು.

ADVERTISEMENT

‘ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ದರ ಹೆಚ್ಚಿಸಿದೆ. ಇದು ಜನವಿರೋಧಿ ನೀತಿ. ಕೂಡಲೇ ದರ ಇಳಿಸಬೇಕು. ಯಾವುದೇ ಕಾರಣಕ್ಕೂ ಹಂಪಿ ಉತ್ಸವ ಕೈಬಿಡಬಾರದು’ ಎಂದು ಹಕ್ಕೊತ್ತಾಯ ಮಾಡಿದರು.

ಮುಖಂಡರಾದ ಗುದ್ಲಿ ಪರಶುರಾಮ, ಕಟಗಿ ರಾಮಕೃಷ್ಣ, ಅನಂತ ಸ್ವಾಮಿ, ಮಂಜು, ಬಸವರಾಜ ನಾಲತ್ವಾಡ್, ಪಾಂಡುರಂಗ, ಜಿಲಾನಿ, ವೈ.ಯಮುನೇಶ, ರಾಮಾಂಜಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.