ADVERTISEMENT

ಬಿಜೆಪಿ ವಿಜಯೋತ್ಸವ, ಬೈಕ್‌ ರ್‍ಯಾಲಿ

ನೈತಿಕ ಹೊಣೆ ಹೊತ್ತು ಕುಮಾರಸ್ವಾಮಿ ರಾಜೀನಾಮೆ ನೀಡಲಿ–ಗವಿಯಪ್ಪ

​ಪ್ರಜಾವಾಣಿ ವಾರ್ತೆ
Published 23 ಮೇ 2019, 13:49 IST
Last Updated 23 ಮೇ 2019, 13:49 IST
ಹೊಸಪೇಟೆಯ ರೋಟರಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಸಂಜೆ ವಿಜಯೋತ್ಸವ ಆಚರಿಸಿದರು
ಹೊಸಪೇಟೆಯ ರೋಟರಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಸಂಜೆ ವಿಜಯೋತ್ಸವ ಆಚರಿಸಿದರು   

ಹೊಸಪೇಟೆ: ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ ಹಾಗೂ ಕೇಂದ್ರದಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬಂದಿರುವುದರಿಂದ ಪಕ್ಷದ ಕಾರ್ಯಕರ್ತರು ಗುರುವಾರ ಸಂಜೆ ನಗರದಲ್ಲಿ ವಿಜಯೋತ್ಸವ ಆಚರಿಸಿದರು.

ನಗರದ ಬಸವೇಶ್ವರ ಬಡಾವಣೆಯಿಂದ ಪ್ರಮುಖ ಮಾರ್ಗಗಳ ಮೂಲಕ ರೋಟರಿ ವೃತ್ತದ ವರೆಗೆ ಬೈಕ್‌ ರ್‍ಯಾಲಿ ನಡೆಸಿದರು. ರ್‍ಯಾಲಿಯುದ್ದಕ್ಕೂ ಮೋದಿ, ಅಮಿತ್‌ ಶಾ, ಯಡಿಯೂರಪ್ಪ ಹಾಗೂ ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು. ಪಕ್ಷದ ಧ್ವಜ, ಹನುಮ ಧ್ವಜ, ಮೋದಿಯವರ ಕಟೌಟ್‌ಗಳನ್ನು ಹಿಡಿದುಕೊಂಡು ನಗರದಲ್ಲೆಡೆ ಸಂಚರಿಸಿದರು.

ಬಳಿಕ ರೋಟರಿ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪರಸ್ಪರ ಗುಲಾಲ್‌ ಎರಚಿಕೊಂಡು ಸಂಭ್ರಮಿಸಿದರು. ಮೋದಿ..ಮೋದಿ.. ಎಂದು ಘೋಷಣೆಗಳನ್ನು ಹಾಕಿದರು. ಶಿಳ್ಳೆ ಹೊಡೆದು, ಭಾರತ್‌ ಮಾತಾ ಕೀ ಜೈ ಎಂದು ಕೂಗಿದರು.

ADVERTISEMENT

ಬಿಜೆಪಿ ಮುಖಂಡ, ಮಾಜಿಶಾಸಕ ಎಚ್‌.ಆರ್‌. ಗವಿಯಪ್ಪ ಮಾತನಾಡಿ, ‘ಇಡೀ ದೇಶದಲ್ಲಿ ಕಾಂಗ್ರೆಸ್‌ ಹಾಗೂ ಇತರೆ ಪಕ್ಷಗಳನ್ನು ಜನ ತಿರಸ್ಕರಿಸಿ ಬಿಜೆಪಿಗೆ ಮಣೆ ಹಾಕಿದ್ದಾರೆ. ರಾಜ್ಯದಲ್ಲಿನ ಭ್ರಷ್ಟ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಮೋದಿಯವರ ಉತ್ತಮ ಆಡಳಿತ ನೀಡಿ ಜನ ಬೆಂಬಲಿಸಿದ್ದಾರೆ. ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಆಡಳಿತ ಕೊಡುವರು’ ಎಂದು ಭರವಸೆ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹ ಕೇಶವಜೀ, ‘ದೇಶದ ಹಿತದೃಷ್ಟಿಯಿಂದ ಜನ ಮೋದಿಯವರನ್ನು ಬೆಂಬಲಿಸಿದ್ದಾರೆ. ಮೋದಿಯವರ ಮೇಲೆ ಜನರಿಗಿರುವ ಭರವಸೆ, ಕಾರ್ಯಕರ್ತರ ಪರಿಶ್ರಮದಿಂದ ಗೆದ್ದಿದ್ದೇವೆ’ ಎಂದು ಹೇಳಿದರು.

ಮುಖಂಡ ಕಿಶೋರ್‌ ಪತ್ತಿಕೊಂಡ ಮಾತನಾಡಿ, ‘ದೇಶದಾದ್ಯಂತ ಮೋದಿ ಹವಾ ಇದೆ ಎಂಬುದು ಈ ಚುನಾವಣೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಬರುವ ಚುನಾವಣೆಯಲ್ಲೂ ಗೆದ್ದು ಹ್ಯಾಟ್ರಿಕ್‌ ಗೆಲುವು ಸಾಧಿಸುತ್ತೇವೆ’ ಎಂದರು.

ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ‘ಪಕ್ಷದ ಕಾರ್ಯಕರ್ತರು, ನಮೋ ಬ್ರಿಗೇಡ್‌, ಸಂಘದ ಕಾರ್ಯಕರ್ತರು ಹಾಗೂ ಮತದಾರರ ಬೆಂಬಲದಿಂದ ದೊಡ್ಡ ಜಯ ಸಿಕ್ಕಿದೆ’ ಎಂದು ಹೇಳಿದರು.

ಮುಖಂಡರಾದ ರಾಣಿ ಸಂಯುಕ್ತಾ, ಪಂಚಪ್ಪ, ಗಾದಿಲಿಂಗಪ್ಪ, ಸಾಲಿ ಸಿದ್ದಯ್ಯ ಸ್ವಾಮಿ, ರಾಘವೇಂದ್ರ, ಶಂಕ್ರಪ್ಪ, ಉಮೇಶ, ಅನಿಲ್‌ ಜೋಷಿ, ಮಲಪನಗುಡಿ ಶಂಕರ್‌, ಸುನೀಲ್‌, ವಿಜಯಕುಮಾರಿ, ಬಸವರಾಜ ನಾಲತ್ವಾಡ, ಯೋಗಾಲಕ್ಷ್ಮಿ, ಪ್ರಿಯಾಂಕ ಜೈನ್‌, ಚಂದ್ರಕಾಂತ ಕಾಮತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.